ರಾಜ್ಯದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ: ಕ್ಯಾ.ಬ್ರಿಜೇಶ್ ಚೌಟ

ಬೆಳ್ತಂಗಡಿ, ಅ.24: ರಾಜ್ಯದ ಮತದಾರರು ಈಗಾಗಲೇ ನಿರ್ಣಯ ಮಾಡಿ ಆಗಿದೆ. ರಾಜ್ಯದಲ್ಲಿ ಪಕ್ಷದ ಪರ ಉತ್ತಮ ವಾತಾವರಣವಿದೆ. ಬೆಳ್ತಂಗಡಿಯ ಶಾಸಕರ ವೈಫಲ್ಯವನ್ನು ಜನತೆಗೆ ಮುಟ್ಟಿಸಬೇಕಾದ ಅಗತ್ಯವಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರನ್ನು ಆಯ್ಕೆ ಮಾಡುವತ್ತ ಕಾರ್ಯಕರ್ತರು ಗಮನಹರಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ಮಂಡಲ ಉಸ್ತುವಾರಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ಬಿಜೆಪಿಯ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ, ತಳಮಟ್ಟದಲ್ಲಿ ಅಚ್ಚುಕಟ್ಟಾಗಿ ಸಮಿತಿಗಳನ್ನು ರಚಿಸುವುದರ ಮೂಲಕ ಸಂಘಟನೆಯನ್ನು ಬಲಪಡಿಸಬೇಕಾದ ಅವಶ್ಯಕತೆ ಇದೆ. ಮತದಾರರ ಪಟ್ಟಿಗೆ ಸೇರ್ಪಡೆ, ಅಂಬೇಡ್ಕರ್ ಜನ್ಮ ಶತಮಾನೋತ್ಸವ ಪ್ರಯುಕ್ತ ಮುಂದಿನ ಎ.14 ರಿಂದ ವರ್ಷಪೂರ್ತಿ, ದಲಿತ ಕಾಲನಿಗಳಲ್ಲಿ ಆರೋಗ್ಯ ತಪಾಸಣೆ, ಕುಟುಂಬ ಕಾರ್ಯಕ್ರಮ, ಸ್ವಚ್ಛ ಭಾರತ, ಜನಪ್ರತಿನಿಧಿಗಳಿಂದ ವಾಸ್ತವ್ಯ ಮೊದಲಾದ ಕಾರ್ಯಕ್ರಮಗಳನ್ನು ತಿಂಗಳಿಗೊಂದರಂತೆ ಹಾಕಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಮನೆಮನೆಗೆ ಮುಟ್ಟಿಸಬೇಕಾದ ಅವಶ್ಯಕತೆ ಇದೆ. ಮರಳು ನೀತಿ, ಬೋರ್‌ವೆಲ್ ನೀತಿ, 94ಸಿಯ ಅವ್ಯವಸ್ಥೆಯಿಂದಾಗಿ ಜನ ಕಂಗೆಟ್ಟಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಶಾಸಕ ಆಯ್ಕೆ ಆಗುವುದು ನಿಶ್ಚಿತ ಎಂದರು.
ವೇದಿಕೆಯಲ್ಲಿ ಪಕ್ಷದ ಉಪಾಧ್ಯಕ್ಷೆ ಶಾರದಾ ರೈ, ಕಾರ್ಯದರ್ಶಿ ಕೊರಗಪ್ಪ ನಾಯ್ಕ, ತಾ. ಉಸ್ತುವಾರಿ ಭಾಗೀರಥಿ ಮುರುಳ್ಯ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಮಂಡಲ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯ್ಕ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ.ಪಂ.ಉಪಾಧ್ಯಕ್ಷೆ ವೇದಾವತಿ ಇದ್ದರು.
ಮಂಡಲ ಸಮಿತಿ ಉಪಾಧ್ಯಕ್ಷೆ ಗೀತಾ ಗೌಡ ಸ್ವಾಗತಿಸಿದರು. ಜಗದೀಶ್ ಕೆ.ಪ್ರಾರ್ಥಿಸಿದರು. ತಾ.ಪಂ. ಸದಸ್ಯ ಜೊಯೆಲ್ ಮೆಂಡೋನ್ಸಾ ವಂದಿಸಿದರು. ಮಂಡಲ ಸಮಿತಿ ಉಪಾಧ್ಯಕ್ಷ ವಿಜಯಗೌಡ ನಿರೂಪಿಸಿದರು.







