ಬಂಟ್ವಾಳ ಯೋಜನಾ ಪ್ರಾಧಿಕಾರಕ್ಕೆ ಸಾರಥಿ ಯಾರು?
ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿದೆ ಚರ್ಚೆ

ಬಂಟ್ವಾಳ, ಅ. 24: ಇಲ್ಲಿನ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪಿಯೂಸ್ ಎಲ್. ರೊಡ್ರಿಗಸ್ ಒಂದೂವರೆ ವರ್ಷದ ಅಧಿಕಾರವಧಿ ಮುಗಿದ ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಖಾಲಿಯಾಗಿ ಎರಡು ತಿಂಗಳು ಕಳೆದಿವೆ. ಮುಂದಿನ ಅವಧಿಗೆ ಯಾರು ಅಧ್ಯಕ್ಷರಾಗಲಿದ್ದಾರೆಂಬ ಚರ್ಚೆ ಕಾಂಗ್ರೆಸ್ ಪಡಸಾಲೆಯಲ್ಲಿ ಭಾರೀ ಜೋರಾಗಿಯೇ ನಡೆಯುತ್ತಿದೆ.
ಪ್ರಸ್ತುತ ಯೋಜನಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಮಂಗಳೂರು ಸಹಾಯಕ ಕಮಿಷನರ್ ಡಾ.ಅಶೋಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ರೊಡ್ರಿಗಸ್ ಮತ್ತೆ ಅಧಿಕಾರದಲ್ಲಿ ಮುಂದುವರಿಯುತ್ತಾರೊ ಅಥವಾ ಹೊಸ ಅಧ್ಯಕ್ಷರ ನೇಮಕವಾಗುತ್ತದೊ ಎನ್ನುವುದು ಸದ್ಯದ ಕುತೂಹಲ. ಪಿಯೂಸ್ ರೊಡ್ರಿಗಸ್‌ರವರೇ ಮುಂದಿನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂಬ ಅಭಿಪ್ರಾಯ ಒಂದೆಡೆ ಕಾಂಗ್ರೆಸ್ ಪಕ್ಷದೊಳಗೆ ಕೇಳಿ ಬರುತ್ತಿದ್ದರೆ ಇನ್ನೊಂದೆಡೆ ಅಧ್ಯಕ್ಷ ಪಟ್ಟಕ್ಕಾಗಿ ಕೆಲವು ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಪಕ್ಷದ ಹೈಕಮಾಂಡ್‌ನಲ್ಲಿ ಪ್ರಭಾವ ಬೀರುತ್ತಿದ್ದಾರೆ ಎಂದೂ ತಿಳಿದು ಬಂದಿದೆ. ಆದರೆ ಸಚಿವ ರಮಾನಾಥ ರೈಯವರ ನಿಕಟವರ್ತಿ ಪಿಯೂಸ್ ರೊಡ್ರಿಗಸ್ ಎರಡನೆ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ರೇಸ್‌ನಲ್ಲಿ ಬಂಗೇರ
ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರರ ಹೆಸರು ಕೂಡಾ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದೆ. ಪುರಸಭೆಯ ಎರಡನೆ ಅವಧಿಯ ಅಧ್ಯಕ್ಷನೆಂದೇ ಬಿಂಬಿತರಾಗಿದ್ದು, ಕೊನೆಗಳಿಗೆಯಲ್ಲಿ ಅಧ್ಯಕ್ಷ ಹುದ್ದೆ ಕೈತಪ್ಪಿದ ಹಿನ್ನೆಲೆಯಲ್ಲಿ ಸದಾಶಿವ ಬಂಗೇರ ಪಕ್ಷದ ಮುಖಂಡರಲ್ಲಿ ಮುನಿಸಿಕೊಂಡಿದ್ದಾರೆ. ತದ ನಂತರ ಅವರು ಪಕ್ಷದ ಚಟುವಟಿಕೆಯಿಂದಲೂ ದೂರ ಇದ್ದಾರೆ. ಸದಾ ಕ್ರೀಯಾಶೀಲವಾಗಿ ಪುರಸಭೆಯ ಸಾಮಾನ್ಯ ಸಭೆಯ ಚರ್ಚೆಯಲ್ಲೂ ಭಾಗವಹಿಸುತ್ತಿದ್ದ ಅವರು ನಂತರ ವಿಪಕ್ಷ ಸಾಲಿನಲ್ಲಿ ಕುಳಿತು ವೌನಕ್ಕೆ ಶರಣಾಗುತ್ತಿದ್ದಾರೆ. ಕೇವಲ ಹಾಜರಾತಿಗಾಗಿ ಮಾತ್ರ ಸಭೆಗೆ ಆಗಮಿಸಿ ಗೌರವ ಧನ, ಉಪಹಾರ ಸ್ವೀಕರಿಸದೆ ತೆರಳುತ್ತಿದ್ದಾರೆ. ಅಲ್ಲದೆ ಪುರಸಭೆ ಅಧ್ಯಕ್ಷ ಹುದ್ದೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕುಲಾಲ ಸಮುದಾಯ ಕೂಡಾ ಕಾಂಗ್ರೆಸ್ ವಿರುದ್ಧ ಅಸಮಾಧಾನ ಗೊಂಡಿತ್ತು. ಈ ನಿಟ್ಟಿನಲ್ಲಿ ಸದಾಶಿವ ಬಂಗೇರರಿಗೆ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡುವ ಬಗ್ಗೆಯೂ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಅಂತ್ಯಕ್ಕೆ ದೀಪಾವಳಿಯ ಸಂದರ್ಭ ಸಿಹಿ ಸುದ್ದಿ ಹೊರ ಬೀಳುವ ನಿರೀಕ್ಷೆ ಇದೆ. ಬಂಟ್ವಾಳ ಕಾಂಗ್ರೆಸ್‌ಗೆ ಸಚಿವ ರಮಾನಾಥ ರೈಯವರೇ ಹೈಕಮಾಂಡ್ ಆಗಿದ್ದಾರೆ. ಅರ್ಹತೆಂು ಮಾನದಂಡದಲ್ಲಿ ಮತ್ತು ಪಕ್ಷಕ್ಕೆ ನಿಷ್ಠರಾಗಿ ದುಡಿದವರನ್ನು ಸಚಿವ ರಮಾನಾಥ ರೈ ಈ ಸ್ಥಾನಕ್ಕೆ ಸೂಚಿಸಲಿದ್ದಾರೆ ಎಂಬುದು ಪಕ್ಷದೊಳಗೆ ಕೇಳಿ ಬರುತ್ತಿರುವ ಮಾತು. ಅಂತೂ ಈ ತಿಂಗಳ ಅಂತ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರ, ಯೋಜನಾ ಪ್ರಾಧಿಕಾರಗಳ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿಗೆ ಪಕ್ಷದ ಹೈ ಕಮಾಂಡ್ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ.
ಬುಡಾ ಅಲ್ಲ ಯೋಜನಾ ಪ್ರಾಧಿಕಾರ
ಬಂಟ್ವಾಳ ಯೋಜನಾ ಪ್ರಾಧಿಕಾರವೋ ಅಥವಾ ನಗರಭಿವೃದ್ಧಿ ಪ್ರಾಧಿಕಾರವೋ ಎನ್ನುವ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲವಿದೆ. ಸಾಮಾನ್ಯ ಭಾಷೆಯಲ್ಲಿ ಯೋಜನಾ ಪ್ರಾಧಿಕಾರವನ್ನೇ ಬುಡಾ (ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ) ಎಂದು ಕರೆಯಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರ ಎಂಬುದು ಸ್ವಾಯತ್ತ ಸಂಸ್ಥೆ. ನಗರಾಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ ಬರಬೇಕಾದರೆ ಅದರದ್ದೇ ಆದ ನೀತಿ ನಿಯಮಗಳಿವೆ. ಜನಸಂಖ್ಯೆ, ವಿವಿಧ ಮೂಲಗಳಿಂದ ಬರುವ ಆದಾಯದ ಪ್ರಮಾಣ, ಒಳಗೊಂಡಿರುವ ಗ್ರಾಮಗಳು, ಅವುಗಳ ಭೌಗೋಳಿಕ ವ್ಯಾಪ್ತಿ ಹೀಗೆ ಹಲವು ಮಾನದಂಡವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಅದಕ್ಕೆ ಹಲವು ವಿಶೇಷ ಅಧಿಕಾರ ಇರುತ್ತದೆ. ಶುಲ್ಕ ವಸೂಲಿ ಮಾಡುವ ಅಧಿಕಾರ, ಯೋಜನೆಗಳ ನಕ್ಷೆ ಸಿದ್ಧಪಡಿಸುವ ಅಧಿಕಾರ, ಜೊತೆಗೆ ಅಧ್ಯಕ್ಷರನ್ನೊಳಗೊಂಡ ಸಮಿತಿ, ಅಧಿಕಾರಿ ವರ್ಗವೂ ಇರುತ್ತದೆ.
ಆದರೆ ಪ್ರಸ್ತುತ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬುಡಾ ಅಸ್ಥಿತ್ವದಲ್ಲಿಲ್ಲ. ಬದಲಾಗಿ ಯೋಜನಾ ಪ್ರಾಧಿಕಾರವಷ್ಟೇ (ಪ್ಲಾನಿಂಗ್ ಅಥಾರಿಟಿ) ಇದೆ. ಯೋಜನೆ ಸಿದ್ಧಪಡಿಸುವ, ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ತಾಂತ್ರಿಕ ಅಭಿಪ್ರಾಯ ನೀಡುವ ಅಧಿಕಾರ ಯೋಜನಾ ಪ್ರಾಧಿಕಾರಕ್ಕಿದೆ. ಈ ಹಿಂದೆ ಈ ಕಾರ್ಯ ನಗರ ಯೋಜನಾ ಸಹಾಯಕ ನಿರ್ದೇಶಕರ ವ್ಯಾಪ್ತಿಗೆ ಒಳಪಟ್ಟಿತ್ತು. ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆಯ ನಕ್ಷೆಯಲ್ಲಿ ತಿಳಿಸಿರುವಂತೆ ಕೆಲಸ ಕಾರ್ಯ ನಡೆಯಿತ್ತಿವೆಯೋ ಎಂಬ ಉಸ್ತುವಾರಿ ನೋಡಿಕೊಳ್ಳುವ ಹಾಗೂ ವರದಿಯನ್ನು ನಗರ ಯೋಜನಾ ಇಲಾಖೆಗೆ ಕಳುಹಿಸುವ ಜವಾಬ್ದಾರಿ ಈ ಯೋಜನಾ ಪ್ರಾಧಿಕಾರಕ್ಕಿದೆ.







