ಕೊಲೆಯಾದ ಕಾರ್ತಿಕ್‌ರಾಜ್ ಕುಟುಂಬದ ದು:ಖದಲ್ಲಿ ಭಾಗಿಯಾದ ಮುಸ್ಲಿಮರು

ಕೊಣಾಜೆ, ಅ.24: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಕಾರ್ತಿಕ್‌ರಾಜ್ ಕುಟುಂಬದ ದುಃಖದಲ್ಲಿ ಸ್ಥಳೀಯ ಮುಸ್ಲಿಮರು ಭಾಗಿಯಾಗಿ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಕಾರ್ತಿಕ್‌ರಾಜ್ ಬಹಳ ಸರಳ ವ್ಯಕ್ತಿತ್ವದ ಯುವಕನಾಗಿದ್ದ. ಹಾಗೇ ಆತನ ತಂದೆ ಉಮೇಶ್ ಬಿಜೆಪಿಯ ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದರು. ಇವರು ಕೂಡಾ ಸರಳ ಸಜ್ಜನಿಕೆಯೊಂದಿಗೆ ಸಮಾಜಸೇವಾ ಮನೋಭಾವನೆಯನ್ನು ಹೊಂದಿದ್ದರು. ಪಜೀರಿನ ಉಮೇಶ್‌ರ ಮನೆ ಪಕ್ಕದಲ್ಲಿಯೇ ಮಸೀದಿಯೊಂದಿದ್ದು ಹಲವು ವರ್ಷಗಳ ಹಿಂದೆ ಮಸೀದಿಯ ನಿರ್ಮಾಣ ಸಂದರ್ಭದಲ್ಲಿ ನೀರಿನ ಕೊರತೆ ಎದುರಾದಾಗ ಉಮೇಶ್ ತಾನೇ ಮುಂದೆನಿಂತು ಮನೆಯ ಕೊಳವೆ ಬಾವಿಯಿಂದ ಬೇಕಾದಷ್ಟು ನೀರನ್ನು ಒದಗಿಸಿದ್ದರು. ಅಲ್ಲದೆ ಹಲವಾರು ಸಂದರ್ಭದಲ್ಲಿ ಮಸೀದಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದಾಗ ಉಮೇಶ್‌ರವರೇ ಮುಂದೆ ಬಂದು ನೀರನ್ನು ಒದಗಿಸಿಕೊಟ್ಟು ಸಾಮರಸ್ಯವನ್ನು ಮೆರೆದಿದ್ದರು. ಉಮೇಶ್‌ರ ಸೇವೆಗಾಗಿ ಮಸೀದಿ ಉದ್ಘಾಟನಾ ಸಂದಭರ್ದಲ್ಲಿ ಮಸೀದಿ ವತಿಯಿಂದ ಅವರನ್ನು ಸನ್ಮಾನಿಸಲಾಗಿತ್ತು.
ರವಿವಾರ ರಾತ್ರಿ ಕಾರ್ತಿಕ್‌ನ ಮೃತದೇಹ ಪಜೀರಿಗೆ ಬಂದಾಗ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರೂ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಉಮೇಶ್‌ರ ದು:ಖದಲ್ಲಿ ಭಾಗಿಯಾಗಿ ಧೈರ್ಯ ತುಂಬಿದರು. ಅಲ್ಲದೆ ಪಾರ್ಥಿವ ಶರೀರ ಬರುವಾಗ ಅಪಾರ ಜನಸ್ತೋಮವೂ ಸೇರಿದ್ದರಿಂದ ಮಸೀದಿಯ ವತಿಯಿಂದಲೇ ದಾರಿಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು.





