ಕಾಂಗ್ರೆಸ್‌ನ ಆಂತರಿಕ ಕಲಹದಿಂದಾಗಿಯೇ ಸರಕಾರ ಉರುಳಲಿದೆ: ಅಮರನಾಥ ಶೆಟ್ಟಿ

ಮಂಗಳೂರು, ಅ.24: ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ದೇವೇಗೌಡರು ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಅಮರನಾಥ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಿಂದಾಗಿಯೇ ಸರಕಾರ ಬೀಳುತ್ತದೆ. ಅವರ ಆಂತರಿಕ ಜಗಳ ಜಾಸ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 15ಕ್ಕೂ ಅಧಿಕ ಮಂದಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದಾರೆ. ಜನಾರ್ದನ ಪೂಜಾರಿಯಂತಹವರು ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಸರಕಾರ ಅಸ್ಥಿರಗೊಳಿಸುವ ಕೆಲಸವನ್ನು ಜೆಡಿಎಸ್ ಮಾಡುವುದಿಲ್ಲ. ಜನಾರ್ದನ ಪೂಜಾರಿ ಹೇಳಿಕೆ ಬೇಸರ ತಂದಿದೆ ಎಂದು ಹೇಳಿದರು. ಜನಾರ್ದನ ಪೂಜಾರಿಯವರಿಂದ ಪ್ರಯೋಜನ ಪಡೆದವರು ಇಂದು ಅವರ ಜೊತೆ ಇಲ್ಲ. ಅವರು ಈಗ ಏಕಾಂಗಿಯಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಅಝೀಝ್ ಕುದ್ರೋಳಿ, ರಮೀಝಾ, ಜೆಡಿಎಸ್ ಮುಖಂಡರಾದ ಹರ್ಷಿತ್ ಸುವರ್ಣ, ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.







