ನಿವೇಶನರಹಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ

ಮಂಗಳೂರು, ಅ.24: ನಗರ ಪಾಲಿಕೆ ಸಿದ್ಧಪಡಿಸಿದ ನಗರದ ನಿವೇಶನರತರ ಪಟ್ಟಿಯಲ್ಲಿ ಸಿಪಿಎಂ ನೇತೃತ್ವದ ನಿವೇಶನರಹಿತರ ಹೋರಾಟ ಸಮಿತಿ ಕ್ರಮಬದ್ಧವಾಗಿ ಸಲ್ಲಿಸಿದ್ದ ಅನೇಕ ಅರ್ಜಿದಾರರ ಹೆಸರು ಕಾಣೆಯಾಗಿದೆ. ಪುರುಷ ಅರ್ಜಿದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಮಂಗಳೂರು ನಗರದ ಬಡ ನಿವೇಶನರತರು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೆೇರಿಯೆದುರು ನಿವೇಶನರಹಿತರ ಹೋರಾಟ ಸಮಿತಿಯ ವತಿಯಿಂದ ನಡೆದ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರದ ನಿವೇಶನರಹಿತರು ಕಳೆದ ಎರಡೂವರೆ ವರ್ಷಗಳಿಂದ ನಿವೇಶನಗಳನ್ನು ಮಹಾನಗರ ಪಾಲಿಕೆ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿಯ ಮೂಲಕ ಈಗಾಗಲೇ ಏಳು ಬಾರಿ ಸಾಮೂಹಿಕ ಪ್ರತಿಭಟನಾ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಈ ದೇಶದ ನಿಜವಾದ ವಾರಸುದಾರರಾದ ಬಡವರಿಗೆ ವಾಸಿಸಲೂ ಭೂಮಿಯಿಲ್ಲ. ಶ್ರೀಮಂತರ ಹಾಗೂ ಭೂಮಾಫಿಯಾದ ವಶದಲ್ಲಿ ಮಂಗಳೂರು ನಗರದಲ್ಲಿ ಹೇರಳವಾದ ಭೂಮಿಯಿದೆ ಎಂದರು.
ಮಂಗಳೂರು ನಗರ ಇವತ್ತು ಸ್ಮಾರ್ಟ್‌ಸಿಟಿಯಾಗುವುದರಲ್ಲಿದ್ದು, ಅಡಳಿತಕ್ಕೆ ಬಡವರ ನಿವೇಶನದ ಬಗ್ಗೆ ಕಾಳಜಿ ಇಲ್ಲವಾಗಿದೆ. ಎಲ್ಲಾ ನಗರದ ಪ್ರಜೆಗಳಿಗೆ ಕನಿಷ್ಠ ವಸತಿಯನ್ನು ಒದಗಿಸದೆ ನಗರವನ್ನು ಸ್ಮಾರ್ಟ್‌ಸಿಟಿ ಮಾಡುವುದಕ್ಕೆ ಅರ್ಥ ಇಲ್ಲ ಎಂದರು.
ಕೇಂದ್ರ ರಾಜ್ಯ ಸರಕಾರಗಳ ಭೂಸ್ವಾಧೀನ ಕಾಯ್ದೆಯ ದುರ್ಬಳಕೆ ಮಾಡಿ ಉದ್ಯಮಿಗಳಿಗೆ ಕೃಷಿಯನ್ನು ಭೂಮಿಯನ್ನು ರೈತರಿಂದ ಅಗ್ಗವಾಗಿ ಕಿತ್ತು ನೀಡಲಾಗುತ್ತಿದೆ. ರಾಜ್ಯ ಸರಕಾರ ನಿವೇಶನ ಭೂಮಿ ಅಥವಾ ಬಡವರು ಅಭಿವೃದ್ಧಿಗೊಳಿಸಿದ ಭೂಮಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ನ. 18ರಂದು ರಾಜ್ಯಾದ್ಯಂತ ರೈತರು ನಡೆಸುವ ಜೈಲ್ ಭರೋ ಕಾರ್ಯಕ್ರಮದಲ್ಲಿ ನಿವೇಶನರಹಿತರು ಭಾಗವಹಿಸುವರು ಎಂದು ಅವರು ಹೇಳಿದರು.
ನಿವೇಶನರತರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳಲ್ಲಿ ಪುರುಷ ಅರ್ಜಿದಾರರ ಹೆಸರನ್ನು ಸೇರಿಸಬೇಕು, ಕಣ್ಣೂರಿನ ಕನ್ನಗುಡ್ಡೆಯಲ್ಲಿ 11.25 ಎಕ್ರೆ ನಿವೇಶನಕ್ಕಾಗಿ ಕಾದಿರಿಸಿದ ಜಮೀನಿನ ಸ್ಪಷ್ಟ ಮಾಹಿತಿ ನೀಡಬೇಕು. ಮಂಗಳೂರು ನಗರದಲ್ಲಿ ಆಯ್ಕೆಯಾದ 2,000 ನಿವೇಶನರಹಿತರ ಅಂತಿಮ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ, ಸಿಪಿಎಂ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್ , ನಿವೇಶನರತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ ,ಕಾರ್ಯದರ್ಶಿ ಸಂತೋಷ್‌ಶಕ್ತಿನಗರ ,ಪ್ರಭಾವತಿ ಬೋಳಾರ ಮೊದಲಾದವರು ಉಪಸ್ಥಿತರಿದ್ದರು







