ಭವಿಷ್ಯದಲ್ಲಿ ಗ್ಯಾರೇಜ್ ಉದ್ಯಮಕ್ಕೆ ಉತ್ತಮ ವಾತಾವರಣ: ಪ್ರಮೋದ್

ಉಡುಪಿ, ಅ.24: ಪ್ರತಿವರ್ಷ ದೇಶದಲ್ಲಿ ವಾಹನಗಳ ಸಂಖ್ಯೆ ಶೇ.16ರಷ್ಟು ಏರಿಕೆಯಾಗುತ್ತಿದ್ದು ಇದರಿಂದಾಗಿ ಗ್ಯಾರೇಜು ಉದ್ಯಮಕ್ಕೆ ಭವಿಷ್ಯದಲ್ಲಿ ಅನು ಕೂಲವಾದ ವಾತಾವರಣ ಸೃಷ್ಠಿಯಾಗಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಭವನದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ 6 ತಿಂಗಳಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಿಂದ ಸುಮಾರು 100 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಉಡುಪಿ ನಗರಕ್ಕೆ ಹತ್ತಿರವಾದ ಗ್ರಾಮಾಂತರ ಪ್ರದೇಶದಲ್ಲಿ ಗ್ಯಾರೇಜು ಮಾಲಕರ ಸಂಘಕ್ಕೆ ಸರಕಾರಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹನುಮಾನ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಲಾಸ್ ನಾಯಕ್, ಮಾಜಿ ಶಾಸಕ ಕೆ.ರಘುಪತಿ ಭಟ್, ಮರಳು ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಹಿರಿಯ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ ಮಾತನಾಡಿದರು.
ಮಂಗಳೂರು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಎ.ಪುರುಷೋತ್ತಮ, ಕ್ಲಾಸಿಕ್ ಆಟೋಮೊಬೈಲ್‌ನ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್, ಜಿಲ್ಲಾ ರಿಕ್ಷಾ ಚಾಲಕ ಮಾಲಕರ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಅಮೀನ್ ಉಪಸ್ಥಿತರಿದ್ದರು. ಸಂಘದ ಸದಸ್ಯ, ಯಕ್ಷಗಾನ ಕಲಾವಿದ ಮಲ್ಪೆ ಸಂತೋಷ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಹೆಬ್ರಿಯ ಪುಟ್ಟಣ್ಣ ಭಟ್, ಅಪಘಾತದ ಗಾಯಾಳು ಹೆಬ್ರಿಯ ಶೇಖರ್ ನಾಯಕ್ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಉದಯ್ ಕಿರಣ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ ಮತ್ತು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.







