ಸರಕಾರದಿಂದ ಕ್ರಿಪ್ರಕ್ರಾಂತಿ: ವೆನೆಝುವೆಲ ಸಂಸತ್ತು ಘೋಷಣೆ

ಕ್ಯಾರಕಸ್, ಅ. 24: ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಜನಮತಗಣನೆಯನ್ನು ತಡೆಹಿಡಿಯುವ ಮೂಲಕ ವೆನೆಝುವೆಲ ಸರಕಾರ ಕ್ಷಿಪ್ರಕ್ರಾಂತಿಯೊಂದನ್ನು ನಡೆಸಿದೆ ಎಂದು ದೇಶದ ಪ್ರತಿಪಕ್ಷ ಪ್ರಾಬಲ್ಯದ ಸಂಸತ್ತು ರವಿವಾರ ಘೋಷಿಸಿದೆ.
ಇದಕ್ಕೆ ಪ್ರತಿಯಾಗಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ನಿರ್ಮಿಸಲಾಗುವುದು ಎಂದಿದೆ.
ಅಧ್ಯಕ್ಷರನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ನಿರ್ಧರಿಸುವ ಜನಮತಗಣನೆಯನ್ನು ಏರ್ಪಡಿಸುವ ಪ್ರಕ್ರಿಯೆಯನ್ನು ಅಮಾನತಿನಲ್ಲಿಡುವ ಚುನಾವಣಾ ಅಧಿಕಾರಿಗಳ ನಿರ್ಧಾರದ ಬಗ್ಗೆ ಆಕ್ರೋಶಗೊಂಡಿರುವ ಪ್ರತಿಪಕ್ಷ ಸಂಸದರು, ‘‘ಸಾಂವಿಧಾನಿಕ ವೌಲ್ಯಗಳು ಹದಗೆಟ್ಟಿವೆ ಹಾಗೂ ‘‘ನಿಕೊಲಸ್ ಮಡುರೊ ಸರಕಾರ ಕ್ರಿಪ್ರಕ್ರಾಂತಿ ನಡೆಸಿದೆ’’ ಎಂಬುದನ್ನು ಘೋಷಿಸುವ ಎರಡು ನಿರ್ಣಯವೊಂದನ್ನು ಅಂಗೀಕರಿಸಿದರು.
ತೈಲ ಸಂಪದ್ಭರಿತ ದೇಶ ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ತುರ್ತು ಅಧಿವೇಶನ ನಡೆಯುತ್ತಿದ್ದಾಗ, ಮಡುರೊ ಬೆಂಬಲಿಗರ ಗುಂಪೊಂದು ಪೊಲೀಸರನ್ನು ಧಿಕ್ಕರಿಸಿ ಅಲ್ಲಿಗೆ ನುಗ್ಗಿತು. ಆಗ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಕಲಾಪಗಳು 45 ನಿಮಿಷಗಳ ಕಾಲ ಸ್ಥಗಿತಗೊಂಡವು.
ಪ್ರತಿಪಕ್ಷಗಳ ಸಂಸದರೇ ಕ್ಷಿಪ್ರಕ್ರಾಂತಿ ನಡೆಸಲು ಮುಂದಾಗಿದ್ದಾರೆ ಎಂದು ಮಡುರೊ ಪರ ಸಂಸದರು ಆರೋಪಿಸಿದ್ದಾರೆ.





