ಸಿಖ್ ವಿರುದ್ಧ ಜನಾಂಗೀಯ ನಿಂದನೆ

ಲಾಸ್ ಏಂಜಲಿಸ್, ಅ. 24: ಸಿಖ್ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಎಂಬುದಾಗಿ ಭಾವಿಸಿ ಜನಾಂಗೀಯ ನಿಂದನೆಗೈದು ಅವರ ಮೇಲೆ ಮದ್ಯವನ್ನು ಎಸೆದ ವ್ಯಕ್ತಿಯ ವಿರುದ್ಧ ದ್ವೇಷಾಪರಾಧ ಆರೋಪವನ್ನು ಹೊರಿಸಲಾಗಿದೆ.
ಕಳೆದ ತಿಂಗಳು ಕ್ಯಾಲಿಫೋರ್ನಿಯ ಅವೆನ್ಯೂ ರೆಸ್ಟೋರೆಂಟ್‌ನ ಹೊರಗಡೆ ಬಲ್ಮೀತ್ ಸಿಂಗ್ ಎಂಬ ವ್ಯಕ್ತಿಯನ್ನು ಪೀಡಿಸಿರುವುದಕ್ಕಾಗಿ ಬೇಕರ್ಸ್‌ಫೀಲ್ಡ್‌ನ ಡೇವಿಡ್ ಸ್ಕಾಟ್ ಹುಕ್ ವಿರುದ್ಧ ಕರ್ನ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿ ಮೊಕದ್ದಮೆ ದಾಖಲಿಸಿದೆ. ಈ ಸಂದರ್ಭದಲ್ಲಿ ಆರೋಪಿಯು ಸಿಖ್ ವ್ಯಕ್ತಿಗೆ ಶಾಪ ಹಾಕುತ್ತಾ, ಬೆದರಿಸುತ್ತಾ ಮೈಮೇಲೆ ಮದ್ಯ ಎಸೆದನೆಂದು ಆರೋಪಿಸಲಾಗಿದೆ.
ನಡೆದ ಘಟನೆಯನ್ನು ವಿವರಿಸಿದ ಸಿಂಗ್, ತಾನು ಮತ್ತು ಸ್ನೇಹಿತರು ಕ್ಯಾಲಿಫೋರ್ನಿಯದ ಬೇಕರ್ಸ್‌ಫೀಲ್ಡ್‌ನ ಹ್ಯಾಬಿಟ್ ಬರ್ಗರ್‌ನಲ್ಲಿ ಊಟಕ್ಕೆ ಹೋಗಿದ್ದೆವು ಎಂದರು. ಫೋನ್ ಕರೆಯೊಂದನ್ನು ಮಾಡುವುದಕ್ಕಾಗಿ ರೆಸ್ಟರಾಂಟ್‌ನ ಹೊರಗೆ ಬಂದಾಗ ಘಟನೆ ನಡೆಯಿತು ಎಂದರು.
ತಾನು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ವ್ಯಕ್ತಿಯೊಬ್ಬ ನೇರವಾಗಿ ತನ್ನ ಬಳಿ ಬಂದನು ಎಂದು ಸಿಂಗ್ ತಿಳಿಸಿದರು. ‘‘ಈ ದೇಶವನ್ನು ಸ್ಫೋಟಿಸಲು ನೀನು ಪ್ರಯತ್ನಿಸುತ್ತಿದ್ದಿ, ನಾನು ನಿನ್ನನ್ನು ಕೊಲ್ಲಬೇಕು. ನಾನು ಈಗಲೇ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದನು. ಶಾಪ ಹಾಕುವ ಹಲವು ಪದಗಳನ್ನು ಆತ ಬಳಸಿದನು ಮತ್ತು ಆತ ಭಾರೀ ಕೋಪದಿಂದ ಇದ್ದಂತೆ ಕಂಡನು’’ ಎಂದು ಸಿಂಗ್ ಹೇಳಿರುವುದಾಗಿ ‘ಕೆರೊ-ಟವಿ’ ಹೇಳಿದೆ.







