ಬಿಜೆಪಿ, ಸಂಘ ಪರಿವಾರದಿಂದ ಪ್ರಕರಣಕ್ಕೆ ಕೋಮು ಬಣ್ಣ?
ಶಿವಮೊಗ್ಗ: ಬೆಂಗಳೂರಿನ ಬಾಲಕಿಯ ಅತ್ಯಾಚಾರ ಪ್ರಕರಣ

ಶಿವಮೊಗ್ಗ, ಅ. 24: ಬೆಂಗಳೂರು ಮೂಲದ ಬಾಲಕಿಯ ಮೇಲೆ ಶಿವಮೊಗ್ಗದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂಒಂದೂವರೆ ತಿಂಗಳ ಕಾಲ ಮನೆಯೊಂದರಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ, ತಲೆಮರೆಸಿ ಕೊಂಡಿರುವ ಈರ್ವರ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ. ಇದೀಗ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಈ ಪ್ರಕರಣದಲ್ಲಿ ರಂಗ ಪ್ರವೇಶ ಮಾಡಿವೆ. ಈ ವಿಷಯ ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲು ಸಂಘಪರಿವಾರದ ಕೆಲ ಸಂಘಟನೆಗಳು ನಿರ್ಧರಿಸಿವೆ. ಇದರಿಂದ ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದ್ದು, ಪ್ರಕರಣಕ್ಕೆ ‘ಕೋಮು ಬಣ್ಣ’ ಹಚ್ಚುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಪ್ರತಿಭಟನೆಗೆ ನಿರ್ಧಾರ: ಸೋಮವಾರ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರ ನಿಯೋಗ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದೆ. ಈ ಸಂದರ್ಭದಲ್ಲಿ ಕೆ.ಎಸ್. ಈಶ್ವರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಆರ್‌ಎಸ್‌ಎಸ್ ಮುಖಂಡರಾದ ನಟರಾಜ್ ಭಾಗವತ್, ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು. ಭೇಟಿಯ ನಂತರ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಬೆಂಗಳೂರಿನ ಬಾಲಕಿಯ ಮೇಲೆ ಶಿವಮೊಗ್ಗದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಒಂದೂವರೆ ತಿಂಗಳ ಕಾಲ ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ. ಪೊಲೀಸರು ಹೇಳುತ್ತಿರುವುದಕ್ಕಿಂತಲೂ ಹೆಚ್ಚಿನ ಜನರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅನುಮಾನಗಳಿವೆ’ ಎಂದು ಆರ್‌ಎಸ್‌ಎಸ್ ಮುಖಂಡ ನಟರಾಜ್ ಭಾಗವತ್ ಆರೋಪಿಸಿದ್ದಾರೆ.
ಎಬಿವಿಪಿ ಸಂಘಟನೆಯ ಮುಖಂಡ ಸಚಿನ್ ರಾಯ್ಕರ್ ಮಾತನಾಡಿ, ’ಪಿಯುಸಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅ. 26 ರಂದು ಶಿವ ಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಕೀಳು ರಾಜಕೀಯ: ’ಅತ್ಯಾಚಾರದಂತಹ ಘಟನೆಗಳು ಇಡೀ ನಾಗರಿಕ ಸಮುದಾಯವೇ ತಲೆತಗ್ಗಿಸುವಂತದ್ದು. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಆದರೆ, ಶಿವಮೊಗ್ಗ ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಅತ್ಯಾಚಾರ ನಡೆಸಿದ ಆರೋಪಿಗಳು ವಿಭಿನ್ನ ಕೋಮಿಗೆ ಸೇರಿದವರಾಗಿದ್ದಾರೆಂಬ ಏಕೈಕ ಕಾರಣದಿಂದ ಬಿಜೆಪಿ ಹಾಗೂ ಸಂಘಪರಿವಾರವು ಪ್ರಕರಣವನ್ನು ರಾಜಕೀ ಯವಗಿ ಬಳಸಿಕೊಳ್ಳಲು ಹುನ್ನಾರ ನಡೆಸುತ್ತಿವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ದೂರಿದ್ದಾರೆ. ’ಈಗಾಗಲೇ ಪ್ರಕರಣದ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಒಮ್ಮೆ ಮಾತ್ರ, ಈ ಕೃತ್ಯದಲ್ಲಿ ಈರ್ವು ಭಾಗಿಯಾಗಿದ್ದಾರೆ. ಇದನ್ನು ಬಾಲಕಿ ಕೂಡ ಖಚಿತ ಪಡಿಸಿದ್ದಾಳೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಸಂಘಪರಿವಾರ ಒಂದೂವರೆ ತಿಂಗಳ ಅವಧಿಯಲ್ಲಿ ಬಾಲಕಿಯ ಮೇಲೆ ಹಲವರು ನಿರಂತರವಾಗಿ ಚಿತ್ರಹಿಂಸೆ ನೀಡಿ ಅತ್ಯಾಚಾರ ನಡೆಸಿದ್ದಾರೆ ಎಂದೆಲ್ಲ ಹೇಳಿ ಜನರ ಹಾದಿ ತಪ್ಪಿಸುತ್ತಿರುವುದೇಕೆ?
ಇಂತಹ ವಿಷಯದಲ್ಲಿಯೂ ರಾಜಕೀಯ ನಡೆಸುವುದೇಕೆ? ಪೊಲೀಸ್ ತನಿಖೆ ನಡೆಯುತ್ತಿರುವ ಹಂತದಲ್ಲಿಯೇ ಒತ್ತಡ ಹೇರುವ, ನಾಗರಿಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದೇಕೆ? ಈ ಮೂಲಕ ಪರೋಕ್ಷವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಳ್ಳುತ್ತಿರುವುದೇಕೆ? ಇದು ಕೀಳುಮಟ್ಟದ ರಾಜಕಾರಣವಲ್ಲದೆ ಮತ್ತೇನು?’ ಎಂದು ಪ್ರಗತಿರ ಸಂಘಟನೆಯ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವು ರಾಜಕೀಯ ರಂಗಪ್ರವೇಶದಿಂದ ವಿಭಿನ್ನ ತಿರುವು ಪಡೆದುಕೊಳ್ಳಲಾರಂಭಿಸಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ಗೂಬೆ ಕೂರಿಸುವ ಕೆಲಸಗಳು ನಡೆಯುತ್ತಿವೆ. ಮುಂದೆ ಈ ಪ್ರಕರಣ ಇನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಮಾಧ್ಯಮದವರ ಸಮ್ಮುಖದಲ್ಲಿ ಈಶ್ವರಪ್ಪ ಆರೋಪ!
ಶಿವಮೊಗ್ಗ ನಗರದಲ್ಲಿ ಕ್ರಿಮಿನಲ್ಸ್ಗಳಿಗೆ ಪೊಲೀಸರ ಭಯವೇ ಇಲ್ಲವಾಗಿದೆ. ಅತ್ಯಾಚಾರಗಳು ನಡೆಯುತ್ತಿವೆ. ನಾಗರಿಕರು ಭಯದಲ್ಲಿ ಜೀವನ ನಡೆಸುವಂತಾಗಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪನವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರ ವಿರುದ್ಧ ಪತ್ರಕರ್ತರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಾಲ್ವರ ಬಂಧನ: ಎಸ್ಪಿ ಅಭಿನವ್ ಖರೆ
ಶಿವಮೊಗ್ಗ, ಅ. 24: ಬೆಂಗಳೂರು ಮೂಲದ ಬಾಲಕಿಯ ಮೇಲೆ ಶಿವಮೊಗ್ಗದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಒಂದೂವರೆ ತಿಂಗಳ ಕಾಲ ಮನೆಯೊಂದರಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅತ್ಯಾಚಾರ ನಡೆದ ದಿನದಂದು ಘಟನಾ ಸ್ಥಳದಲ್ಲಿದ್ದ ಸಕ್ರೆಬೈಲ್‌ನ ಅಮ್ಜದ್ (35) ಬಾಲಕಿಯನ್ನು ತಮ್ಮ ಮನೆಯಲ್ಲಿ ಅಕ್ರಮವಾಗಿ ಇಟ್ಟು ಕೊಂಡಿದ್ದು ಹಾಗೂ ಪೊಲೀಸರಿಗೆ ಮಾಹಿತಿ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಅಮ್ಝದ್‌ನ ಬಾವ ಆಟೊ ಚಾಲಕ ಮುಹಮ್ಮದ್ ಯೂಸೂಫ್(47), ಇವರ ಪತ್ನಿ ಫರ್ವೀನ್ ಬಾನು (36) ಹಾಗೂ ಇವರ ಸಂಬಂಧಿ ಮುಬಾರಕ್ (30) ಎಂಬವರನ್ನು ಬಂಧಿಸಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಾದ ಆಟೊ ಚಾಲಕ ರಾದ ಶಾರುಖ್ ಹಾಗೂ ತೋಷಿಕ್ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದ್ದು, ಇಷ್ಟರಲ್ಲಿಯೇ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಎಂದು ಎಸ್ಪಿ ಖರೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ರೈಲಿನಲ್ಲಿ ಆಗಮಿಸಿದ್ದಳು: ಬೆಂಗಳೂರಿನ ನಿವಾಸಿಯಾದ, ಕೋಲಾರದ ಕಾಲೇಜ್‌ವೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷ ಪ್ರಾಯದ ಬಾಲಕಿ ಸೆ.7ರಂದು ತಾಯಿಯೊಂದಿಗೆ ಗಲಾಟೆ ಮಾಡಿಕೊಂಡು ಬೆಂಗಳೂರಿನಿಂದ ರೈಲಿನ ಮೂಲಕ ಶಿವಮೊಗ್ಗ ನಗರದ ಮುಖ್ಯ ರೈಲು ನಿಲ್ದಾಣಕ್ಕೆ ರಾತ್ರಿ 8 ಗಂಟೆ ವೇಳೆಗೆ ಆಗಮಿಸಿದ್ದಾಳೆ. ರೈಲು ನಿಲ್ದಾಣದ ಬಳಿಯಿದ್ದ ಆಟೊ ಚಾಲಕ ಶಾರುಖ್ ಆಶ್ರಯ ನೀಡುವುದಾಗಿ ನಂಬಿಸಿ ಬಾಲಕಿಯನ್ನು ಆಟೊದಲ್ಲಿ ಹತ್ತಿಸಿಕೊಂಡಿದ್ದಾನೆ. ಬಳಿಕ ಇತರ ಇಬ್ಬರು ಆಟೊ ಚಾಲಕರಾದ ಅಮ್ಝದ್ ಹಾಗೂ ತೋಷಿಕ್‌ರೊಂದಿಗೆ ಸಕ್ರೆಬೈಲು ಗ್ರಾಮದ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದಿದ್ದಾನೆ. ಈ ವೇಳೆ ಬಾಲಕಿಯ ಮೇಲೆ ಶಾರುಖ್ ಹಾಗೂ ತೋಷಿಕ್ ಅತ್ಯಾಚಾರ ಎಸಗಿದ್ದಾರೆ.
ತದನಂತರ ಬಾಲಕಿಯನ್ನು ಅಮ್ಝದ್ ಇಮಾಮ್ ಬಾಡ ಬಡಾವಣೆಯಲ್ಲಿರುವ ತನ್ನ ಬಾವ ಮುಹಮ್ಮದ್ ಯೂಸೂಫ್‌ನ ಮನೆಗೆ ತಂದು ಬಿಟ್ಟಿದ್ದರು. ಇತ್ತೀಚೆಗೆ ಈ ವಿಷಯ ಸುತ್ತಮುತ್ತಲಿನವರಿಗೆ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅ.20 ಪೊಲೀಸರು ಯೂಸುಫ್‌ನ ಮನೆಗೆ ತೆರಳಿ ಬಾಲಕಿಯ ರಕ್ಷಣೆ ಮಾಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಆಟೊ ಚಾಲಕರಿಗೆ ಎಚ್ಚರಿಕೆ
ರಾತ್ರಿ ವೇಳೆ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಇಲಾಖೆಯವತಿಯಿಂದ ಕೈಗೊಳ್ಳಲಾಗಿದೆ. ಈಗಾಗಲೇ ಆಟೊ ಚಾಲಕರ ಸಭೆ ನಡೆಸಿ ಸೂಕ್ತ ಸಲಹೆ - ಸೂಚನೆ ನೀಡಲಾಗಿದೆ. ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ. ರಾತ್ರಿ ವೇಳೆ ಬಸ್, ರೈಲು ನಿಲ್ದಾಣಗಳ ಬಳಿ ಯುವತಿಯರು ಕಂಡು ಬಂದರೆ ಅಂತಹವರ ಬಗ್ಗೆ ಅಲ್ಲಿರುವ ಆಟೊ ಚಾಲಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಅವರನ್ನು ಸಮೀಪದ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಕರೆತಂದು ಬಿಡಬೇಕು. ಇಲ್ಲದಿದ್ದರೆ ಅಂತಹ ಆಟೊ ಚಾಲಕರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಇದೇ ಸಂದರ್ಭ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಾಪತ್ತೆ ಕೇಸ್ ದಾಖಲು
ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಬಾಲಕಿ ಮನೆ ತೊರೆದಿದ್ದಳು. ಬಳಿಕ ಆಕೆಯ ಪೋಷಕರು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಅಲ್ಲಿನ ಪೊಲೀಸರು ಶೋಧ ಕಾರ್ಯಾಚರಣೆ ಕೂಡ ನಡೆಸುತ್ತಿದ್ದರು ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದ್ದಾರೆ.







