ದ್ವಿತೀಯ ಟೆಸ್ಟ್: ಗೆಲುವಿನತ್ತ ಪಾಕಿಸ್ತಾನ

ಅಬುಧಾಬಿ, ಅ.24: ವೆಸ್ಟ್‌ಇಂಡೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ಪಾಕಿಸ್ತಾನ ಗೆಲುವಿನ ಹಾದಿಯಲ್ಲಿದೆ. ನಾಲ್ಕನೆ ದಿನವಾದ ಸೋಮವಾರ ಗೆಲ್ಲಲು 456 ರನ್ ಗುರಿ ಪಡೆದಿರುವ ವಿಂಡೀಸ್ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದೆ.
ಆರಂಭಿಕ ಆಟಗಾರ ಬ್ರಾತ್‌ವೈಟ್(67) ಅರ್ಧಶತಕ ಬಾರಿಸಿದರು. ಬ್ಲಾಕ್‌ವುಡ್ ಅಜೇಯ 41 ರನ್ ಗಳಿಸಿದ್ದಾರೆ. ವಿಂಡೀಸ್ ಅಂತಿಮ ದಿನದಾಟವಾದ ಮಂಗಳವಾರ 6 ವಿಕೆಟ್ ನೆರವಿನಿಂದ ಇನ್ನೂ 285 ರನ್ ಗಳಿಸಬೇಕಾದ ಸಂಕಷ್ಟದಲ್ಲಿದೆ. ಪಾಕ್ ಪರ ಸ್ಪಿನ್ನರ್ ಯಾಸಿರ್ ಷಾ(2-60) ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ಅಂತಿಮ ದಿನದಾಟದಲ್ಲಿ ವಿಂಡೀಸ್‌ನ ಉಳಿದ ಆರು ವಿಕೆಟ್ ಕಬಳಿಸುವ ವಿಶ್ವಾಸದಲ್ಲಿದ್ದಾರೆ.
ಇದಕ್ಕೆ ಮೊದಲು 1 ವಿಕೆಟ್ ನಷ್ಟಕ್ಕೆ 114 ರನ್‌ನಿಂದ 2ನೆ ಇನಿಂಗ್ಸ್ ಆರಂಭಿಸಿದ ಪಾಕ್ 2 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅಝರ್ ಅಲಿ(79), ಅಸದ್ ಶಫೀಕ್(ಅಜೇಯ 58) ಹಾಗೂ ಯೂನಿಸ್ ಖಾನ್(ಅಜೇಯ 29) ವಿಂಡೀಸ್ ಗೆಲುವಿಗೆ ಕಠಿಣ ಸವಾಲು ವಿಧಿಸಲು ನೆರವಾದರು.





