ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನ ಫ್ಯಾಕ್ಟ್‌ಫೈಲ್
ಭಾರತ-ನ್ಯೂಝಿಲೆಂಡ್ ನಾಲ್ಕನೆ ಏಕದಿನ:

ಹೊಸದಿಲ್ಲಿ, ಅ.24: ಮೊಹಾಲಿಯಲ್ಲಿ ರವಿವಾರ ನಡೆದ ಎರಡನೆ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿರುವ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಬುಧವಾರ ನಾಯಕ ಎಂಎಸ್ ಧೋನಿ ತವರು ಪಟ್ಟಣ ರಾಂಚಿಯಲ್ಲಿ ನಾಲ್ಕನೆ ಹಾಗೂ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ.
ನಾಲ್ಕನೆ ಏಕದಿನ ಪಂದ್ಯ ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಜೆಎಸ್‌ಸಿಎ) ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಜೆಎಸ್‌ಸಿಎ ಸ್ಟೇಡಿಯಂ ಇತಿಹಾಸ:
ಜೆಎಸ್‌ಸಿಎ ಸ್ಟೇಡಿಯಂ 2012ರ ಅಕ್ಟೋಬರ್‌ನಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದುಕೊಂಡಿದ್ದು, ಈವರೆಗೆ ಮೂರು ಏಕದಿನ ಹಾಗೂ ಏಕೈಕ ಟ್ವೆಂಟಿ-20 ಪಂದ್ಯದ ಆತಿಥ್ಯವಹಿಸಿಕೊಂಡಿದೆ.
2013ರ ಜನವರಿಯಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದಿದೆ. ಆ ಪಂದ್ಯದಲ್ಲಿ ಧೋನಿ ಪಡೆ ಇಂಗ್ಲೆಂಡ್‌ನ್ನು 7 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ. ಗೆಲ್ಲಲು 156 ರನ್ ಗುರಿ ಪಡೆದಿದ್ದ ಭಾರತ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಅರ್ಧಶತಕ(77) ನೆರವಿನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
2013ರ ಅಕ್ಟೋಬರ್‌ನಲ್ಲಿ ನಡೆದ ಪಂದ್ಯ ಫಲಿತಾಂಶರಹಿತವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 296 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 4.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದ್ದಾಗ ಮಳೆ ಆಗಮಿಸಿ ಪಂದ್ಯ ರದ್ದುಗೊಂಡಿತ್ತು.
2014ರ ನವೆಂಬರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೆ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ(ಅಜೇಯ 139) ನೇತೃತ್ವದ ಭಾರತ ತಂಡ 7 ವಿಕೆಟ್ ನಷ್ಟದಲ್ಲಿ 288 ರನ್ ಗಳಿಸಿ ಜಯಭೇರಿ ಬಾರಿಸಿತ್ತು.
2016ರ ಫೆಬ್ರವರಿ 12 ರಂದು ನಡೆದ ಟ್ವೆಂಟಿ-20 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮುಖಾಮುಖಿಯಾಗಿದ್ದು, 69 ರನ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 6 ವಿಕೆಟ್‌ನಷ್ಟಕ್ಕೆ 196 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 9 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಅಶ್ವಿನ್(3-14) ಉತ್ತಮ ಬೌಲಿಂಗ್ ಸಂಘಟಿಸಿದರು.
40,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಜೆಎಸ್‌ಸಿಎ ಸ್ಟೇಡಿಯಂ 2017ರ ಮಾರ್ಚ್‌ನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದ್ದು, ಆಸ್ಟ್ರೇಲಿಯ ಟೆಸ್ಟ್ ಸರಣಿಯ 3ನೆ ಪಂದ್ಯವನ್ನು ಇಲ್ಲಿ ಆಡಲಿದೆ.
ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲದೆ ಏಳು ಐಪಿಎಲ್ ಪಂದ್ಯಗಳು, ಐದು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಪಂದ್ಯಗಳು ಹಾಗೂ ಏಳು ದೇಶೀಯ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿದೆ.
ಏಕದಿನ ಅಂಕಿ-ಅಂಶ
ಗರಿಷ್ಠ ಸ್ಕೋರ್: 50 ಓವರ್‌ಗಳಲ್ಲಿ 295/8(ಆಸ್ಟ್ರೇಲಿಯ-ಭಾರತ, 2013)
ಕನಿಷ್ಠ ಸ್ಕೋರ್: 42.2 ಓವರ್‌ಗಳಲ್ಲಿ 155(ಇಂಗ್ಲೆಂಡ್-ಭಾರತ, 2013)
ಗರಿಷ್ಠ ವೈಯಕ್ತಿಕ ಸ್ಕೋರ್: ಅಜೇಯ 139-ವಿರಾಟ್ ಕೊಹ್ಲಿ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(ಶ್ರೀಲಂಕಾ-ಭಾರತ, 2014)
ಶ್ರೇಷ್ಠ ಬೌಲಿಂಗ್: 4/73-ಅಜಂತಾ ಮೆಂಡಿಸ್(ಶ್ರೀಲಂಕಾ-ಭಾರತ 2014)
ಗರಿಷ್ಠ ಜೊತೆಯಾಟ: ಜಾರ್ಜ್ ಬೈಲಿ-ಗ್ಲೆನ್ ಮ್ಯಾಕ್ಸ್‌ವೆಲ್‌ರಿಂದ 5ನೆ ವಿಕೆಟ್‌ಗೆ 153 ರನ್ ಜೊತೆಯಾಟ(ಆಸ್ಟ್ರೇಲಿಯ-ಭಾರತ, 2013)
ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್: ವಿರಾಟ್ ಕೊಹ್ಲಿ(3 ಏಕದಿನಗಳಲ್ಲಿ 216)
ಗರಿಷ್ಠ ವಿಕೆಟ್ ಪಡೆದ ಬೌಲರ್: ಆರ್.ಅಶ್ವಿನ್(3 ಏಕದಿನಗಳಲ್ಲಿ 6 ವಿಕೆಟ್)







