ಕೇಂದ್ರದ ನೀತಿ ಖಂಡಿಸಿ ಟಿಪ್ಪುಸಹಾರ ಯುವಜನ ಸಂಘದಿಂದ ಮನವಿ
ಏಕರೂಪ ನಾಗರಿಕ ಸಂಹಿತೆ
.jpg)
ಸಾಗರ, ಅ.24: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ತರಲು ಮುಂದಾಗಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ, ಸೋಮವಾರ ಟಿಪ್ಪುಸಹಾರ ಯುವಜನ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು. ಮುಸ್ಲಿಮರ ಶರಿಯತ್ ಕಾನೂನಿನ ತ್ರಿವಳಿ ತಲಾಖ್ ವಿಷಯದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿ, ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ. ಇದನ್ನು ತಾಲೂಕಿನ ಸಮಸ್ತ ಮುಸ್ಲಿಮ್‌ಬಾಂಧವರು ಉಗ್ರವಾಗಿ ಖಂಡಿಸುತ್ತಿದ್ದು, ಕೇಂದ್ರ ಸರಕಾರ ಈ ಚಿಂತನೆಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಭಾರತದಲ್ಲಿ ನೂರಾರು ಜಾತಿಮತಗಳಿವೆ. ಧರ್ಮದ ಆಚರಣೆ ಭಿನ್ನವಾದರೂ ಸರ್ವಧರ್ಮದ ಸಾರ ಒಂದೇ ಆಗಿದೆ. ಸರ್ವರೂ ತಮ್ಮ ಧರ್ಮವನ್ನು ಪ್ರೀತಿಸಿ, ಇತರ ಧರ್ಮವನ್ನು ಗೌರವಿಸುವ ಮೂಲಕ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಎಲ್ಲ ಧರ್ಮದವರು ತಮ್ಮ ಧರ್ಮವನ್ನು ಅನುಸರಿಸುತ್ತಾ, ಆಚರಿಸುತ್ತಾ ಜೀವಿಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಭಾರತದಲ್ಲಿ ಮುಸ್ಲಿಮರು ಶರಿಯತ್ ಕಾನೂನಿನಂತೆ ಜೀವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಮುಸ್ಲಿಮರ ವೈಯಕ್ತಿಕ ಕಾನೂನಿನ ಬಗ್ಗೆ ಹಸ್ತಕ್ಷೇಪ ಮಾಡುವ ಮೂಲಕ ಕೇಂದ್ರ ಸರಕಾರ ಮುಸ್ಲಿಮ್ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ದೇಶದಲ್ಲಿ ಧಾರ್ಮಿಕ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಕೇಂದ್ರ ಸರಕಾರ ಮಾಡುತ್ತಿರುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಗೆ ಸಂವಿಧಾನದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರಕಾರ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ದೇಶದ ಮುಸ್ಲಿಮ್ ಯಾವುದೇ ಕಾರಣಕ್ಕೂ ಶರಿಯತ್ ಕಾನೂನಿನಲ್ಲಿ ಬದಲಾವಣೆ, ಮತ್ತೊಬ್ಬರು ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ. ಸರಕಾರ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ತನ್ನ ನಿಲುವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಸೈಯದ್ ಜಮೀಲ್, ಗೌರವಾಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ನಗರ ಘಟಕದ ಅಧ್ಯಕ್ಷ ಸೈಯದ್ ಜಾಕೀರ್, ಉಪಾಧ್ಯಕ್ಷ ನೂರುಲ್ಲಾ, ಕಾರ್ಯದರ್ಶಿ ಶಬ್ಬೀರ್, ಬಾಷಾ ಶೇಕ್, ಮುಲ್ಲಾ ಮೊಹಿದ್ದೀನ್, ಸೈಯದ್ ತನ್ವೀರ್, ಮೌಲಾನಾ ಕಲಿಮುಲ್ಲಾ, ಮೌಲಾನ ತೌಫಿಕ್ ಇನ್ನಿತರರು ಹಾಜರಿದ್ದರು.





