ಸಂಘ ಪರಿವಾರ, ಬಿಜೆಪಿ ನಿಲುವಿಗೆ ಪಿಎಫ್‌ಐ ಖಂಡನೆ

ಚಿಕ್ಕಮಗಳೂರು, ಅ.24: ನಿರಂತರವಾಗಿ ಸಮಾಜ ಸೇವೆಯಲ್ಲಿ ನಿರತವಾಗಿರುವ ಪಿಎಫ್‌ಐಯ ಬಗ್ಗೆ ಸಂಘಟನೆಯ ವರ್ಚಸ್ಸಿಗೆ ಧಕ್ಕೆ ಬರುವಂತಹ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಕೋಮುವಾದಿ ಸಂಘಪರಿವಾರ ಹಾಗೂ ಬಿಜೆಪಿ ನಿಲುವನ್ನು ಪಿಎಫ್‌ಐ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ದಂಧೆೆಯ ಹಗೆತನದಿಂದ ಆತನನ್ನು ಕೊಲೆ ಮಾಡಲಾಗಿದೆ. ಆದರೆ, ಸಂಘಪರಿವಾರವು ಕೊಲೆಯನ್ನು ಪಿಎಫ್‌ಐ ಕಾರ್ಯಕರ್ತರ ಮೇಲೆ ಹೊರಿಸಲು ಪಿತೊರಿ ನಡೆಸಿದ್ದರು ಎಂಬುದು ಸಿಸಿಬಿ ಪೊಲೀಸರಿಂದ ಬಹಿರಂಗವಾಗಿದೆ ಎಂದಿದ್ದಾರೆ.
ಅಲ್ಲದೆ, ಕಳೆದ ಬಾರಿ ಮಡಿಕೇರಿಯಲ್ಲಿ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಕುಟ್ಟಪ್ಪ ಪ್ರಕರಣ, ಶಿವಮೊಗ್ಗದಲ್ಲಿ ಕುಟುಂಬಸ್ಥರಿಂದಲೇ ವಿಶ್ವನಾಥ್ ಕೊಲೆ ಪ್ರಕರಣಗಳನ್ನು ಪಿಎಫ್‌ಐ ಮೇಲೆ ಹೊರಿಸುವ ತಂತ್ರಗಳು ನಡೆಸಿದ್ದರು. ಇಂತಹ ಹಲವು ಪ್ರಕರಣಗಳನ್ನು ಪಿಎಫ್‌ಐ ಕಾರ್ಯಕರ್ತರ ಮೇಲೆ ಹೊರಿಸಲು ಪ್ರಯತ್ನಿಸಿ ಮುಖಭಂಗ ಅನುಭವಿಸಿದ್ದರೂ ಪದೇ, ಪದೇ ಸಂಘಟನೆಯ ಕಡೆ ಬೆರಳು ತೋರಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದ್ದಾರೆ.
ದೇಶದಲ್ಲಿ ಹಲವು ಪರಿಹಾರ ಕಾಣದ ಮೂಲಭೂತ ಸಮಸ್ಯೆಗಳಿವೆ. ಇದ್ಯಾವುದರ ಬಗ್ಗೆಯೂ ಮಾತನಾಡದ ಸಂಘಪರಿವಾರದವರು ಅಲ್ಪಸಂಖ್ಯಾಂತರು, ದಲಿತರ ಮೇಲೆ ದೌರ್ಜನ್ಯ ನಡೆಸುತ್ತಾ ದೇಶದಲ್ಲಿ ಕೋಮುಗಲಭೆೆ ಹಬ್ಬಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿರುವ ಸಂಘಟಕರು, ಇತ್ತೀಚೆಗೆ ಫ್ಲೆಕ್ಸ್ ನಲ್ಲಿದ್ದ ರಾಮನ ಮುಖವನ್ನು ಅಶ್ಲೀಲಗೊಳಿಸಿದ್ದರು. ನಿಷ್ಠಾವಂತ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆಯಲ್ಲಿ ಕೈವಾಡವೂ ಇವರದ್ದೇ ಆಗಿದೆ. ಹಾಗೂ ದನದ ವ್ಯಾಪಾರಿ ಪ್ರಶಾಂತ ಪೂಜಾರಿಯನ್ನು ಕೊಲೆ ಮಾಡಿದವರು ಯಾರೆಂದು ದೇಶಕ್ಕೆ ತಿಳಿದ ವಿಚಾರ. ಇದನ್ನೆಲ್ಲಾ ಮರೆಮಾಚಲು ಈಗ ಪಿಎಫ್‌ಐ ಹೆಸರಿಗೆ ಕಳಂಕ ತರುವ ಪ್ರಯತ್ನಗಳಲ್ಲಿ ಸಂಘಪರಿವಾರ ನಿರತವಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.





