ಧರ್ಮವನ್ನು ಅರಿತು ಅನುಸರಿಸುವ ಕಾರ್ಯವಾಗಲಿ
ಡಾ.ವೀರೇಂದ್ರ ಹೆಗ್ಗಡೆ ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 49ನೆ ವರ್ಧಂತ್

ಬೆಳ್ತಂಗಡಿ, ಅ.24: ಪ್ರತಿಯೊಬ್ಬರೂ ಧರ್ಮವನ್ನು ಅರಿತು ಅನುಸರಿಸುವ ಕಾರ್ಯವನ್ನು ಮಾಡಬೇಕಿದೆ. ಸಧರ್ಮದ ನಂಬಿಕೆಗಳೊಂದಿಗೆ ಮೂಢ ನಂಬಿಕೆಗಳು ಇಂದು ನಮ್ಮ ಸಮಾಜದಲ್ಲಿ ಆವರಿಸಿಕೊಂಡಿದೆ. ಭಯದ ನಡುವೆ ವಾಸಿ ಸುತ್ತಿರುವ ಜನತೆಯನ್ನು ಹೊರ ಬರುವಂತೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 49ನೆ ವರ್ಧಂತ್ಯುತ್ಸವ ಹಾಗೂ ಧರ್ಮಸ್ಥಳಕ್ಕೆ ರಾಷ್ಟ್ರದಲ್ಲಿಯೇ ಸ್ವಚ್ಛ ಧಾರ್ಮಿಕ ನಗರ ಪ್ರಶಸ್ತಿ ಪಡೆದ ಕುರಿತು ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ರಾಜ್ಯ ಸರಕಾರದ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ದೇಶಕ್ಕೆ ಮಾದರಿಯಾದ ರೀತಿಯಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಹಳ್ಳಿಗಳಲ್ಲಿಯೂ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಕ್ಷೇತ್ರದ ಸಾಧನೆಯನ್ನು ದೇಶವೇ ಗುರುತಿಸಿದೆ ಎಂದರು. ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿದರು. ಶಾಸಕ ಕೆ.ವಸಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕೌಜಲಗಿಮಠ್, ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಇದೇ ಸಂದರ್ಭ ಸಫಾಯಿಗಿರಿ ಪ್ರಶಸ್ತಿ ಪಡೆದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದರು. ಪ್ರಶಸ್ತಿ ಪಡೆಯಲು ಸಹಕರಿಸಿದ ಗ್ರಾಪಂಗೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷ ಚಂದನ್ ಕಾಮತ್ ಪ್ರಶಸ್ತಿ ಸ್ವೀಕರಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೊವರ್ಮ ಸ್ವಾಗತಿಸಿದರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ನಾರಾಯಣರಾವ್ ವಂದಿಸಿದರು.





