ಕಳಕಳಿ ಇದ್ದರೆ ‘ಮೀಸಲಾತಿ ಹೆಚ್ಚಳಕ್ಕೆ’ ಒತ್ತಡ ಹೇರಿ
ಬಿಜೆಪಿ ಮುಖಂಡರಿಗೆ ಉಗ್ರಪ್ಪ ಸವಾಲು
ಬೆಂಗಳೂರು, ಅ.24: ಪರಿಶಿಷ್ಟರ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಬಿಜೆಪಿ ಮುಖಂಡರಿಗೆ ನಿಜವಾದ ಕಳಕಳಿ ಇದ್ದರೆ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸಲಾಗುವುದು ಎಂದು ಬಿಜೆಪಿ ಮುಖಂಡರು ನಿನ್ನೆ ರಾಯಚೂರು ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ.
ಶೋಷಿತರ ಬಗ್ಗೆ ಬಿಜೆಪಿ ಮುಖಂಡರಿಗೆ ಕಾಳಜಿ ಇದ್ದರೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೆ ಮನವರಿಕೆ ಮಾಡಿಕೊಡಬೇಕು. ಅದುಬಿಟ್ಟು ಎಸ್ಟಿ ಸಮುದಾಯದ ಮೂಗಿಗೆ ತುಪ್ಪ ಸವರುವ ಕೆಲಸ ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಈ ಹಿಂದೆ ಐದು ವರ್ಷ ಆಡಳಿತದಲ್ಲಿದ್ದ ಬಿಜೆಪಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಎಸ್ಟಿ ಸಮುದಾಯದ ಮೇಲೆ ಬಿಜೆಪಿ ಮುಖಂಡರಿಗೆ ಪ್ರೀತಿ ಹುಟ್ಟಿದ್ದು, ಇದು ಚುನಾವಣಾ ಗಿಮಿಕ್ಕು ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ತಮಿಳುನಾಡು ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯನ್ನು ಆಧರಿಸಿ ಶೇ.68ರಷ್ಟು ಮೀಸಲಾತಿ ನೀಡಲಾಗಿದ್ದು, ಸಂವಿಧಾನದ ಮಾನ್ಯತೆಯೂ ದೊರೆತಿದೆ. ಅದೇ ರೀತಿ 50 ಲಕ್ಷಕ್ಕೂ ಅಕ ಜನಸಂಖ್ಯೆ ಹೊಂದಿರುವ ಎಸ್ಟಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀಡಲು ಕೇಂದ್ರ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದನ್ನು ಬಿಟ್ಟರೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ. ಶೋಷಣೆಗೆ ಸಿಲುಕಿರುವ ಎಸ್ಟಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಿಜೆಪಿ ಯಾವುದೇ ಆದ್ಯತೆಯನ್ನು ನೀಡಿಲ್ಲ ಎಂದು ಟೀಕಿಸಿದರು.





