ಸೋಲಾರ್ ಪ್ರಕರಣ: ಕೇರಳಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಸಹಿತ 6 ಮಂದಿವಿರುದ್ಧ ಬೆಂಗಳೂರಿನ ಕೋರ್ಟು ಆದೇಶ
.png)
ಬೆಂಗಳೂರು, ಅ. 25: ಸೋಲಾರ್ ಪ್ರಕರಣದಲ್ಲಿ ಕೇರಳದ ಮಾಜಿಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಬೆಂಗಳೂರು ಅಡಿಷನಲ್ ಸಿಟಿ ಸಿವಿಲ್ ಕೋರ್ಟು ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಸೋಲಾರ್ ಯೋಜನೆಯ ಹೆಸರಿನಲ್ಲಿ ಒಂದು ಕೋಟಿ 35 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಉದ್ಯಮಿ ಮತ್ತು ಕೋಟ್ಟಯಂ ಉಝವೂರ್‌ನ ನಿವಾಸಿ ಎಂ.ಕೆ. ಕುರುವಿಳ ಸಲ್ಲಿಸಿದ್ದ ಅರ್ಜಿಯಲ್ಲಿ ವಿಚಾರಣೆಗೆತ್ತಿಕೊಂಡ ಕೋರ್ಟು 1,60,85,700ರೂಪಾಯಿ ನೀಡಬೇಕೆಂದು ಆರೋಪಿಗಳಿಗೆ ಆದೇಶಿಸಿದೆ.
ಶೇ.12ರಂತೆ ಬಡ್ಡಿ ಸಹಿತ ಮೊತ್ತವನ್ನು ಕೋರ್ಟು ಲೆಕ್ಕಹಾಕಿದೆ. ಆರುತಿಂಗಳೊಳಗೆ ನೀಡಬೇಕು. ಸೋಲಾರ್ ಕೇಸಿಗೆ ಸಂಬಂಧಿಸಿದ ಮೊದಲ ತೀರ್ಪು ಇದೆಂದು ವರದಿಯಾಗಿದೆ. ಉಮ್ಮನ್ ಚಾಂಡಿ ಪ್ರಕರಣದಲ್ಲಿ ಐದನೆ ಆರೋಪಿಯಾಗಿದ್ದಾರೆ. ಎರ್ನಾಕುಲಂ ಕಾಕ್ಕನಾಡ್ ಕೇಂದ್ರವಾಗಿಟ್ಟು ಕಾರ್ಯನಿರ್ವಹಿಸುವ ಸೋಸ ಎಜುಕೇಶನ್ ಕನ್ಸಲ್ಟಂಟ್ಸ್ ಎನ್ನುವ ಕಂಪೆನಿ ಒಂದನೆ ಆರೋಪಿಯಾಗಿದೆ. ಕಂಪೆನಿ ಎಂಡಿ ಬಿನು ನಾಯರ್ ಎರಡನೆ ಆರೋಪಿ, ನಿರ್ದೇಶಕ ಆಂಡ್ರೂಸ್ ಮೂರನೆ ಆರೋಪಿ ಹಾಗೂ ಯೂತ್ ಕಾಂಗ್ರೆಸ್ ನಾಯಕ ದಿಲ್ಜಿತ್ ನಾಲ್ಕನೆ ಮತ್ತು ಸೋಸ ಕನ್ಸಲ್ಟಂಟ್ಸ್ ಪ್ರೆವೈಟ್ ಲಿಮಿಟೆಡ್ ಆರನೆ ಆರೋಪಿಯಾಗಿದ್ದಾರೆ.
ಸೋಲಾರ್ ಕೇಸಿನಲ್ಲಿ ಉಮ್ಮನ್‌ಚಾಂಡಿ ವಿರುದ್ಧ ಬಂದಿರುವ ಮೊದಲ ತೀರ್ಪುಇದಾಗಿದ್ದು, ಕೇಸಿನಲ್ಲಿ ಎರಡು ಬಾರಿ ಸಮನ್ಸ್ ಕಳುಹಿಸಿಯೂ ಕೋರ್ಟಿನಲ್ಲಿ ಹಾಜರಾಗಲು ಅವರು ವಿಫಲರಾಗಿದ್ದರು. ದೂರನ್ನು ಮಾತ್ರ ಪರಿಗಣಿಸಿ ಕೋರ್ಟು ತೀರ್ಪು ನೀಡಿದೆ. ಸೋಲಾರ್ ತಂತ್ರಜ್ಞಾನ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಕೇಂದ್ರ ರಾಜ್ಯ ಸಬ್ಸಿಡಿ ಲಭ್ಯಗೊಳಿಸಲಾಗುವುದು ಎಂದು ಹೇಳಿ ಹಣ ಪಡೆದು ವಂಚಿಸಿದ್ದಾರೆಂದು 2015 ಮಾರ್ಚ್ 23ಕ್ಕೆ ಕುರುವಿಳ ಕೋರ್ಟಿಗೆ ದೂರು ನೀಡಿದ್ದರು.
ದಿಲ್ಲಿಯ ಕೇರಳ ಹೌಸ್‌ನಲ್ಲಿ ಉಮ್ಮನ್ ಚಾಂಡಿಯವರನ್ನು ಆಂಡ್ರೂಸ್ ಮೂಲಕ ಭೇಟಿಯಾಗಿದ್ದೆ.ಗನ್‌ಮ್ಯಾನ್ ಸಲೀಂರಾಜ್‌ರ ಫೋನ್‌ನಲ್ಲಿ ಉಮ್ಮನ್‌ಚಾಂಡಿಯವರೊಡನೆ ಮಾತಾಡಿದ್ದೇನೆ ಎಂದು ಕೋರ್ಟಿಗೆ ನೀಡಿದ ದೂರಿನಲ್ಲಿ ಕುರುವಿಳ ತಿಳಿಸಿದ್ದರು. ಆದರೆ ಯೋಜನೆಯ ಕುರಿತು ನೀಡಿದ ಯಾವ ಭರವಸೆಯನ್ನೂ ಪಾಲಿಸಿಲ್ಲ ಆದ್ದರಿಂದ ಹೂಡಿಕೆ ಮೊತ್ತದ ಬಡ್ಡಿಸಹಿತ 1.61ಕೋಟಿ ರೂಪಾಯಿ ತನಗೆ ಮರುಪಾವತಿಸಬೇಕೆಂದು ಕುರುವಿಲ ಕೋರ್ಟಿಗೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ.







