ಚೆನ್ನಿತ್ತಲರಿಗೆ ಕೊಲೆ ಬೆದರಿಕೆಯ ತನಿಖೆ : ಪಿಣರಾಯಿ

ತಿರುವನಂತಪುರಂ,ಅ. 25: ಪ್ರತಿಪಕ್ಷನಾಯಕ ರಮೇಶ್ ಚೆನ್ನಿತ್ತಲರಿಗೆ ಫೋನ್‌ಮೂಲಕ ಬಂದಿರುವ ಕೊಲೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸದನಕ್ಕೆ ತಿಳಿಸಿದ್ದಾರೆ. ಈ ವಿಷಯವನ್ನು ತಿರುವಾಂಕೂರ್ ರಾಧಕೃಷ್ಣನ್ ಸದನದಲ್ಲಿ ಎತ್ತಿದ್ದರು. ಸೆಕ್ಯುರಿಟಿ ಉದ್ಯೋಗಿಯ ಮೇಲೆ ವಾಹನ ಹರಿಸಿಕೊಂದು ಜೀವಾವಧಿಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸುತ್ತಿರುವ ಮುಹಮ್ಮದ್ ನಿಝಾಮ್ ವಿರುದ್ಧ ಮಾತಾಡಿದರೆ ಕೊಲ್ಲುವುದಾಗಿ ಚೆನ್ನಿತ್ತಲರಿಗೆ ಫೋನ್‌ಮೂಲಕ ಬೆದರಿಕೆ ಒಡ್ಡಲಾಗಿದೆ ಎಂದು ತಿರುವಾಂಕೂರ್ ರಾಧಕೃಷ್ಣನ್ ಸದನಕ್ಕೆ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸದನಕ್ಕೆ ತಿಳಿಸಿದ್ದಾರೆಂದು ವರದಿಯಾಗಿದೆ.
ಎರಡು ದಿವಸಗಳಿಂದ ಇಂಟರ್‌ನೆಟ್ ಕರೆ ಮೂಲಕ ವಿದೇಶದಿಂದ ತನಗೆ ಕೊಲೆ ಬೆದರಿಕೆ ಲಭಿಸುತ್ತಿದೆ ಎಂದು ಚೆನ್ನಿತ್ತಲ ಸದನಕ್ಕೆ ವಿವರಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದ ಚೆನ್ನಿತ್ತಲ ಕಳೆದ ದಿವಸ ರಾತ್ರೆ 11.22ಕ್ಕೆ ಬಂದ ಸಂದೇಶದಲ್ಲಿ ತನ್ನನ್ನು ಅಥವಾ ಕುಟಂಬದಲ್ಲಿ ಒಬ್ಬರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ. ಸಂದೇಶವನ್ನು ಭೂಗತ ಡಾನ್ ರವಿಪೂಜಾರಿ ಕಳುಹಿಸಿದ್ದಾನೆ. ಇದು ನಂಬರ್ ಸಹಿತ ಬಂದ ಸಂದೇಶವಾಗಿದೆ. ಆದ್ದರಿಂದ ತಾನು ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಮತ್ತು ಡಿಜಿಪಿಗೆ ದೂರು ನೀಡಿದ್ದೇನೆ ಎಂದು ಚೆನ್ನಿತ್ತಲ ತಿಳಿಸಿದ್ದಾರೆಂದು ವರದಿಯಾಗಿದೆ.







