ಅತ್ಯಾಶ್ಚರ್ಯ, ಕೋಮಾಕ್ಕೆ ಮೊದಲು ಇಂಗ್ಲೀಷ್ ಮಾತಾಡುತ್ತಿದ್ದ, ಪ್ರಜ್ಞೆ ಬಂದಾಗ ಇನ್ನೊಂದು ಭಾಷೆಯನ್ನು ಮಾತಾಡುತ್ತಾನೆ !

ನ್ಯೂಯಾರ್ಕ್, ಅ.25: ಅಟ್ಲಾಂಟಾದ ಹದಿನಾರು ವರ್ಷದ ಹೈಸ್ಕೂಲ್ ಹುಡುಗ ನೆಸೆಮೋಹ್ ಫುಟ್ಬಾಲ್ ಆಟವಾಡುವಾಗ ಕಳೆದ ತಿಂಗಳು ಇನ್ನೊಬ್ಬ ಹುಡುಗ ಆತನ ತಲೆಗೆ ಕಿಕ್ ಕೊಟ್ಟ ನಂತರ ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಗೆ ತಲುಪಿದ್ದ. ಆದರೆ ಕೋಮಾದಿಂದ ಸಹಜ ಸ್ಥಿತಿಗೆ ಮರಳಿದಾಗ ಈ ಹಿಂದೆ ಕೇವಲ ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದ ಆತ ಸ್ಪ್ಯಾನಿಶ್ ಭಾಷೆಯನ್ನು ಅಪ್ಪಟ ಸ್ಪೇನ್ ನಾಗರಿಕರಂತೆ ಮಾತನಾಡಲಾರಂಭಿಸಿ ಆತನ ಹೆತ್ತವರಿಗೂ ಇತರರಿಗೂ ಆಶ್ಚರ್ಯ ಹುಟ್ಟಿಸಿದ್ದ. ಆತನ ಮನೆಯಲ್ಲಿ ಅಥವಾ ಆತನ ಗೆಳೆಯರಿಗೂ ಸ್ಪ್ಯಾನಿಶ್ ಭಾಷೆ ಬರುತ್ತಿರಲಿಲ್ಲ.
ಆದರೆ ಇದೀಗ ಆತ ನಿಧಾನವಾಗಿ ತನ್ನ ಸ್ಪ್ಯಾನಿಶ್ ಭಾಷೆಯ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾನೆ ಹಾಗೂ ಆತನ ಹಿಂದಿನ ಇಂಗ್ಲಿಷ್ ಭಾಷಾ ಜ್ಞಾನ ಆತನಿಗೆ ಮರಳಿ ಬರುತ್ತಿದೆ.
ಆತನ ಈ ವಿಚಿತ್ರ ಸಮಸ್ಯೆಗೆ ಕಾರಣ ಫಾರಿನ್ ಆಕ್ಸೆಂಟ್ ಸಿಂಡ್ರೋಮ್. ಇಲ್ಲಿ ಮೆದುಳಿಗಾಗುವ ಗಾಯಗಳಿಂದಾಗಿ ವ್ಯಕ್ತಿಯ ಮಾತನಾಡುವ ಶೈಲಿಯೇ ಬದಲಾಗಿ ಬಿಡುತ್ತದೆ. ಇಂತಹ ಸಮಸ್ಯೆಯನ್ನು ಮೊಟ್ಟಮೊದಲಾಗಿ 1941 ರಲ್ಲಿ ನಾರ್ವೇಯ ಮಹಿಳೆಯೊಬ್ಬಳು ಅನುಭವಿಸಿದ್ದಳು. ಆಕೆಯ ಮೆದುಳಿಗೆ ಕೆಲ ಹರಿತವಾದ ಆಯುಧಗಳಿಂದುಂಟಾದ ಗಾಯದಿಂದ ಆಕೆ ಜರ್ಮನಿ ಶೈಲಿಯಲ್ಲಿ ಮಾತನಾಡಲಾರಂಭಿಸಿದ್ದಳು.
ಅಂದಿನಿಂದ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.
ಮೂರು ವರ್ಷಗಳ ಹಿಂದೆ ಪೊಲೀಸರು ನೌಕಾ ಪಡೆಯ ಸಿಬ್ಬಂದಿಯೊಬ್ಬ ದಕ್ಷಿಣ ಕ್ಯಾಲಿಫೋರ್ನಿಯಾದ ಹೊಟೇಲ್ ಒಂದರಲ್ಲಿ ಪ್ರಜ್ಞಾಹೀನನಾಗಿರುವುದನ್ನು ಗಮನಿಸಿದ್ದರು. ಆದರೆ ಅವನಿಗೆ ಎಚ್ಚರವಾದಾಗ ಆತನಿಗೆ ತನ್ನ ಬಗ್ಗೆ ಏನೂ ಅರಿವಿರಲಿಲ್ಲ ಹಾಗೂ ಆತ ಸ್ವೀಡಿಶ್ ಭಾಷೆ ಮಾತ್ರ ಮಾತನಾಡುತ್ತಿದ್ದ.
ಆಸ್ಟ್ರೇಲಿಯದಲ್ಲಿ ಮಾಜಿ ಮಹಿಳಾ ಬಸ್ ಚಾಲಕಿಯೊಬ್ಬರು ಸ್ವಲ್ಪ ಸಮಯದ ಹಿಂದೆ ಕಾರು ಅಪಘಾತಕ್ಕೊಳಗಾಗಿದ್ದರು. ಆಕೆಯ ಬೆನ್ನಿನ ಮೂಳೆ ಹಾಗೂ ದವಡೆ ಇದರಿಂದ ಮುರಿದಿತ್ತು, ಎಚ್ಚರವಾದಾಗ ಆಕೆ ಕೂಡ ಫ್ರೆಂಚ್ ಶೈಲಿಯಲ್ಲಿ ಮಾತನಾಡಲು ಆರಂಭಿಸಿದ್ದಳು.
ಈ ವರ್ಷ ಕೂಡ ಟೆಕ್ಸಾಸ್ ಮಹಿಳೆಯೊಬ್ಬಳು ದವಡೆ ಶಸ್ತ್ರಕ್ರಿಯೆಗೊಳಗಾದ ನಂತರ ಬ್ರಿಟಿಷ್ ಶೈಲಿಯಲ್ಲಿ ಮಾತನಾಡಲಾರಂಭಿಸಿದ್ದಳು.
ಮೆದುಳಿನ ನರ ಮಂಡಲದಲ್ಲಿ ಎಲ್ಲಿಯಾದರೂ ಒಂದು ಸಣ್ಣ ಹಾನಿಯಾದರೂ ಅದು ವ್ಯಕ್ತಿ ಮಾತನಾಡುವ ರೀತಿಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ ಎಂದು ಈ ಫಾರಿನ್ ಆಕ್ಸೆಂಟ್ ಸಿಂಡ್ರೋಮ್ ತಜ್ಞ ಡಾ. ಕರೆನ್ ಕ್ರೂಟ್ ಹೇಳಿದ್ದಾರೆ.







