ಹಠಾತ್ ‘ಟಾಟಾ’ ಹೇಳಿದ ಹಿಂದಿನ ಕಾರಣಗಳೇನು ಗೊತ್ತೇ ?
ಇದು ಪರಿಪೂರ್ಣವಾಗಿ ಪ್ಲ್ಯಾನ್ ಮಾಡಿದ ಕ್ಷಿಪ್ರ ಕ್ರಾಂತಿ

ಸೈರಸ್ ಪದಚ್ಯುತಿ ಹಿಂದಿನ ’ಮಿಸ್ಟರಿ’ ಬಯಲು
ಮುಂಬೈ, ಅ.25: ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಕಂಪೆನಿಯ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಿದ್ದು ಇಡೀ ಉದ್ಯಮರಂಗಕ್ಕೆ ಆಶ್ಚರ್ಯ ಹುಟ್ಟಿಸಿದ್ದರೂ ಈ ಪದಚ್ಯುತಿಗೆ ಕ್ಷಣಗಣನೆ ಕೆಲ ತಿಂಗಳ ಹಿಂದಿನಿಂದಲೇ ಆರಂಭವಾಗಿತ್ತು.
ಆಗಸ್ಟ್ 26 ರಂದು ಟಾಟಾ ಸನ್ಸ್ ಆಡಳಿತ ಮಂಡಳಿ ವಿಸ್ತರಣೆಯಾದಾಗ ಪಿರಾಮಲ್ ಎಂಟರ್ ಪ್ರೈಸಸ್ ಅಧ್ಯಕ್ಷ ಅಜಯ್ ಪಿರಾಮಲ್ ಹಾಗೂ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರನ್ನು ಸೇರಿಸಲಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಈ ವಿಚಾರದಲ್ಲಿ ಸೈರಸ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಅಂದ ಹಾಗೆ ಈ ಕ್ರಮ ಮಿಸ್ತ್ರಿ ನೇತೃತ್ವದ ಟಾಟಾ ಸನ್ಸ್ ಆಡಳಿತ ಮಂಡಳಿಯ ಮೇಲೆ ಟಾಟಾ ಟ್ರಸ್ಟ್ನ ಹಿಡಿತ ಬಿಗಿಗೊಳಿಸುವ ನಿಟ್ಟಿನಲ್ಲಿ ನಡೆದಿತ್ತು.
ಇದಕ್ಕೂ ಎರಡು ತಿಂಗಳ ಹಿಂದೆ ಟಾಟಾ ಪವರ್ ಕಂಪೆನಿಯು 1.4 ಬಿಲಿಯನ್ ಡಾಲರ್ ಮೌಲ್ಯದ ವೆಲ್ ಸ್ಪನ್ ಸೋಲಾರ್ ಫಾರ್ಮ್ಸ್ ಸ್ವಾಧೀನಪಡಿಸುವ ಪ್ರಕ್ರಿಯೆಗೆ ರತನ್ ಟಾಟಾ ಅಥವಾ ಇತರ ಪ್ರಮುಖ ಶೇರುದಾರರ ಅಭಿಪ್ರಾಯ ಕೇಳದೆಯೇ ಮಿಸ್ತ್ರಿ ಒಪ್ಪಿಗೆ ಸೂಚಿಸಿದ್ದರು.
ಎರಡು ವರ್ಷಗಳ ಹಿಂದೆ ಶಪೂರ್ಜಿ ಪಲ್ಲೊಂಜಿ ಜನ್ಮ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ ಉದ್ಯಮ ಹಾಗೂ ಕೈಗಾರಿಕಾ ರಂಗದ ದಿಗ್ಗಜರೆಲ್ಲರು ಭಾಗವಹಿಸಿದ್ದರೂ ರತನ್ ಟಾಟಾ ಅವರು ಅಲ್ಲಿರಲಿಲ್ಲ. ಅವರು ಥಾಯ್ ಪೆವಿಲಿಯನ್ ನಲ್ಲಿ ಸೈರಸ್ ಅವರ ಸಂಬಂಧಿಯೊಬ್ಬರೊಂದಿಗೆ ಊಟ ಮಾಡುತ್ತಿದ್ದರು. ಟಾಟಾ ಅವರು ಈ ಕಾರ್ಯಕ್ರಮದಲ್ಲಿ ಅಗತ್ಯ ಭಾಗವಹಿಸಬೇಕಿದ್ದರೂ ಅವರ ಅನುಪಸ್ಥಿತಿ ಹಲವರಿಗೆ ಸರಿ ಕಂಡಿರಲಿಲ್ಲ.
ಇಂಡಿಯನ್ ಹೊಟೇಲ್ ಕೋ ಇದರ ವಿದೇಶಿ ಆಸ್ತಿಗಳನ್ನುಮಾರಾಟ ಮಾಡುವ ಹಾಗೂ ಇಂಗ್ಲೆಂಡಿನಲ್ಲಿ ಸಂಸ್ಥೆಯ ಸ್ಟೀಲ್ ಉದ್ಯಮವನ್ನು ಮುಚ್ಚುವ ಮಿಸ್ತ್ರಿ ನಿರ್ಧಾರ ಟಾಟಾ ಟ್ರಸ್ಟ್ ಗಳಿಗೆ ಸರಿ ಕಂಡಿರಲಿಲ್ಲ.
ಅಂತೆಯೇ ಎನ್‌ಟಿಟಿ ಡೊಕೊಮೊ ವಿರುದ್ಧ ನಡೆದ ದೊಡ್ಡ ಮಟ್ಟದ ಕಾನೂನು ಹೋರಾಟವೂ ಸಂಸ್ಥೆಯ ಹಿರಿಯ ತಲೆಗಳಿಗೆ ಅಸಮಾಧಾನ ತಂದಿತ್ತು. 2014 ರಲ್ಲಿ ರತನ್ ಟಾಟಾ ಜತೆ ಹೆಚ್ಚು ಆತ್ಮೀಯವಾಗಿದ್ದ ಇಂಡಿಯನ್ ಹೊಟೇಲ್ಸ್ ಇದರ ಆಡಳಿತ ನಿರ್ದೇಶಕ ರೇಮಂಡ್ ಬಿಕ್ಸನ್ ಅವರನ್ನು ಮಿಸ್ತ್ರಿ ಪದಚ್ಯುತಗೊಳಿಸಿದಾಗ ಟಾಟಾ ಮತ್ತು ಮಿಸ್ತ್ರಿ ಸಂಬಂಧ ಹಿಂದಿನಂತಿರಲಿಲ್ಲವೆಂಬ ಅರಿವು ಎಲ್ಲರಿಗೂ ಆಗಿತ್ತು.
ಮಿಸ್ತ್ರಿ ಕಂಪೆನಿಗೆ ಮಾಡುತ್ತಿದ್ದ ನೇಮಕಾತಿಗಳು ಕೂಡ ಹಲವರಿಗೆ ಅಸಮಾಧಾನ ತಂದಿದ್ದವು.







