ವಿಶ್ವದ ಎರಡನೇ ಅತಿ ದೊಡ್ಡ ತಂಬಾಕು ಕಂಪೆನಿ ಏನು ಹೇಳುತ್ತಿದೆ ಗೊತ್ತೇ ?
ಧೂಮಪಾನಿಗಳೇ ಗಮನಿಸಿ

ಝೂರಿಚ್, ಅ.25:ವಿಶ್ವದ ಎರಡನೇ ಅತಿ ದೊಡ್ಡ ತಂಬಾಕು ಕಂಪೆನಿಯಾದ ಫಿಲಿಪ್ ಮೋರಿಸ್ ಇಂಟರ್ ನ್ಯಾಷನಲ್ ಜನರಿಗೆ ತಂಬಾಕು ಸೇವಿಸುವುದನ್ನು ಬಿಡಲು ಹೇಳುತ್ತಿದೆ. ವಿಶ್ವ ತಂಬಾಕು ಮುಕ್ತವಾಗುವುದೆಂಬ ಕನಸನ್ನು ಈ ಕಂಪೆನಿ ಕಾಣುತ್ತಿದೆ. ಈ ಕಂಪೆನಿಯಲ್ಲಿ ಕೆಲಸ ಮಾಡುವ ಹಲವು ವಿಜ್ಞಾನಿಗಳು ಈಗ ಬಹಳ ದೊಡ್ಡ ಕಾರ್ಯವೊಂದನ್ನು ಸಾಧಿಸಲು ಹೊರಟಿದ್ದಾರೆ. ಸಿಗರೇಟಿಗೆ ಪರ್ಯಾಯ ಉತ್ಪನ್ನವನ್ನು ಆವಿಷ್ಕರಿಸುವುದು. ಈ ಉತ್ಪನ್ನ ಜೀವಕ್ಕೆ ಹಾನಿಕರವಾಗುವುದಿಲ್ಲ ಎಂಬ ಬಲವಾದ ನಂಬಿಕೆ ವಿಜ್ಞಾನಿಗಳದ್ದು.
ಬ್ರಿಟಿಷ್ ಅಮೇರಿಕನ್ ಟೊಬ್ಯಾಕೋ ಕಂಪೆನಿ ರೆನಾಲ್ಡ್ಸ್ ಅಮೇರಿಕನ್ ಖರೀದಿಸಲು47 ಬಿಲಿಯನ್ ಡಾಲರ್ ನೀಡಲು ಸಿದ್ಧವೆಂದು ಹೇಳಿರುವುದು ಸಿಗರೇಟಿಗೆ ಪರ್ಯಾಯ ಉತ್ಪನ್ನ ಕಂಡು ಹಿಡಿಯಲು ಫಿಲಿಪ್ ಮೋರಿಸ್ ಮತ್ತಷ್ಟು ದೃಢ ಮನಸ್ಸು ಹೊಂದುವಂತೆ ಮಾಡಿದೆ.
ವಿಶ್ವದಾದ್ಯಂತ ತಂಬಾಕು ಉತ್ಪನ್ನಗಳು ಪ್ರತಿ ವರ್ಷ ಆರು ಮಿಲಿಯನ್ ಜನರ ಪ್ರಾಣ ಬಲಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಕಂಪೆನಿಗಳು ನಿಕೋಟಿನ್ ಮುಕ್ತ ಉತ್ಪನ್ನಗಳನ್ನುತಯಾರಿಸುವತ್ತ ಹೆಚ್ಚು ಆಸಕ್ತಿ ವಹಿಸುತ್ತಿವೆ ಹಾಗೂ ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸುತ್ತಿವೆ.
ಹಾಗಾದರೆ ಫಿಲಿಪ್ ಮೋರಿಸ್ ಕಂಪೆನಿ ಆವಿಷ್ಕರಿಸಲು ಯತ್ನಿಸುತ್ತಿರುವ ಪರ್ಯಾಯ ಸಿಗರೇಟ್ ನಿಜವಾದ ಸಿಗರೇಟುಗಳಿಗೆ ಗುಡ್ ಬೈ ಹೇಳುವಷ್ಟು ಸಾಮರ್ಥ್ಯ ಹೊಂದಿದೆಯೇ ? ಈ ಬಗ್ಗೆ ಬಹಳ ಪ್ರಮುಖ ಪರೀಕ್ಷೆಯೊಂದು ಮುಂದಿನ ವರ್ಷ ನಡೆಯಲಿದೆಯೆಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಡ್ರೆ ಕಲಂಟ್ಝಿ ಪೌಲೋಸ್ ಹೇಳುತ್ತಾರೆ.
ಝೂರಿಚ್ ನಲ್ಲಿರುವ ಕಂಪೆನಿಯ ಸ್ವಿಸ್ ರಿಸರ್ಚ್ ಸೆಂಟರ್ - ಕ್ಯೂಬ್- ಗೋಡೆಗಳ ನಡುವೆ ಏನು ನಡೆಯುತ್ತಿದೆಯೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ತಾನು ಹೊಸ ಉತ್ಪನ್ನಗಳನ್ನು ತರಲು ಯತ್ನಿಸಿದಾಗೆಲ್ಲಾ ಹೆಚ್ಚೆಚ್ಚು ಜನರು ಸಿಗರೇಟು ಸೇವನೆ ಮಾಡಲಾರಂಭಿಸಿದ್ದಾರೆಂಬುದರ ಬಗ್ಗೆ ಕಂಪೆನಿಗೆ ಅರಿವಿದೆ.
ಕೆಲ ವರ್ಷಗಳ ಹಿಂದೆ ಈ ಕಂಪೆನಿ ವೇಪ್ ಎಂಬ ಉತ್ಪನ್ನಬಿಡುಗಡೆಗೊಳಿಸಿದ್ದರೆ ಈ ಬಾರಿ ಐಕೋಸ್ ಎಂಬ ಉತ್ಪನ್ನ ತಯಾರಿಸುತ್ತಿದೆಯೆನ್ನಲಾಗಿದೆ.ಈ ನೀಲಿ ಬಣ್ಣದ ಐಕೋಸ್ ಪ್ಲಾಸ್ಟಿಕ್ ಕೇಸನ್ನು ತೆರೆದಲ್ಲಿ ಒಳಗೆ ಪೆನ್ನಿನಂತೆ ಕಾಣುವ ಹೀಟರ್ ಒಂದಿದೆ. ಇದರ ಒಂದು ತುದಿಗೆ ಹೀಟ್ಸ್ ಎಂದು ಕರೆಯಲ್ಪಡುವ ಸಣ್ಣ ಗಾತ್ರದ ಸಿಗರೇಟುಗಳನ್ನು ಒಳಕ್ಕೆ ತೂರಿಸಲಾಗುತ್ತದೆ.ತಂಬಾಕನ್ನು ಸ್ವಲ್ಪ ಬಿಸಿ ಮಾಡಿದಾಗ ಸಿಗರೇಟು ಸೇದಿದ ಅನುಭವವಾಗುತ್ತದೆ ಆದರೆ ಅದು ಸಿಗರೇಟ್ ಸೇವನೆ ಅಲ್ಲವೆಂದು ಹೇಳಲಾಗುತ್ತಿದೆಯಾದರೂ ಅದೇನೆಂದು ಫಿಲಿಪ್ ಮೋರಿಸ್ ಕಂಪೆನಿಗೇ ತಿಳಿದಿಲ್ಲ. ಕೆಲವರ ಪ್ರಕಾರ ಈ ಉತ್ಪನ್ನದ ಹೆಸರು ‘ಐ-ಖೋಸ್’ ಎಂದರೆ ಐ ಕ್ವಿಟ್ ಸ್ಮೋಕಿಂಗ್ ಎಂದರ್ಥವಾಗಿದೆ.
ಏನೇ ಮಾಡಿದರೂ ಸಿಗರೇಟ್ ಸೇವನೆಯೆಂಬ ಕೆಟ್ಟ ಹವ್ಯಾಸವನ್ನು ಅರೆ ಗಳಿಗೆಯಲ್ಲಿ ಯಾವುದೇ ಉತ್ಪನ್ನದಿಂದ ಬದಲಾಯಿಸಲು ಸಾಧ್ಯವಿಲ್ಲವೆನ್ನುತ್ತಾರೆ ತಜ್ಞರು.







