ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಪಹರಣದ ತನಿಖೆ ಸರಿಯಾಗಿ ನಡೆದಿಲ್ಲ: ಯೆಚೂರಿ

ಹೊಸದಿಲ್ಲಿ, ಅಕ್ಟೋಬರ್ 25: ಜೆಎನ್‌ಯು ವಿದ್ಯಾರ್ಥಿ ನಜೀಬ್ ನಾಪತ್ತೆ ವಿಷಯದಲ್ಲಿ ತನಿಖೆ ಗಂಭೀರವಾಗಿ ನಡೆಯುವುದಿಲ್ಲ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಸೀತರಾಂ ಯೆಚೂರಿ ಹೇಳಿದ್ದಾರೆ ಎಂದು ವರದಿಯಾಗಿದೆ. ತನಿಖೆ ನಡೆಸುವಲ್ಲಿ ಪೊಲೀಸರು ನಿರ್ಲಕ್ಷ್ಯವೆಸಗುತ್ತಿರುವುದನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೋರ್ಚಾದಲ್ಲಿ ಅವರು ಮಾತಾಡುತ್ತಿದ್ದರು.
ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗಿದ್ದರೂ ತನಿಖೆ ಸರಿಯಾದ ರೀತಿಯಲ್ಲಿ ಪ್ರಗತಿ ಕಂಡಿಲ್ಲ. ಪೊಲೀಸರು ಮತ್ತು ಸರಕಾರ ಸೇರಿ ಸಂಚು ಹೆಣೆದದ್ದರಿಂದಾಗಿ ಹೀಗೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ದಿಲ್ಲಿಯ ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಜೆಎನ್‌ಯು ವಿದ್ಯಾರ್ಥಿಗಳು ಜಂಟಿಯಾಗಿ ದಿಲ್ಲಿಯ ಮಂಡಿ ಹೌಸ್‌ನಿಂದ ಜಂತರ್ ಮಂತರ್‌ಗೆ ನಡೆಸಿದ ಜಾಥಾದಲ್ಲಿ ನಾಪತ್ತೆಯಾದ ವಿದ್ಯಾರ್ಥಿ ನಜೀಬ್‌ರ ತಾಯಿಕೂಡಾ ಭಾಗವಹಿಸಿದ್ದರು.
ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರಪತಿ ಮತ್ತು ಅಲ್ಪಸಂಖ್ಯಾತ ಆಯೋಗಕ್ಕೂ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ನಾಪತ್ತೆಯಾಗುವ ಮೊದಲು ಎಬಿವಿಪಿ ಕಾರ್ಯಕರ್ತರು ನಜೀಬ್‌ಗೆ ಥಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ನಜೀಬ್ ಸಹಪಾಠಿ ಶಾಹಿದ್ ಎಂಬ ವಿದ್ಯಾರ್ಥಿ ನಿನ್ನೆ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.





