ಸೇನಾಧಿಕಾರಿಗಳ ಸ್ಥಾನಮಾನ ಕೆಳದರ್ಜೆಗೆ ಇಳಿಸಿದ ಸರಕಾರ
ಸೇನಾವಲಯದಲ್ಲಿ ವ್ಯಾಪಕ ಅಸಮಾಧಾನ

ಹೊಸದಿಲ್ಲಿ, ಅ.25: ಕೇಂದ್ರ ಸರಕಾರ ಸೇನಾಧಿಕಾರಿಗಳ ಸ್ಥಾನಮಾನವನ್ನು ಕೆಳದರ್ಜೆಗೆ ಇಳಿಸಿದ್ದು ಸರಕಾರದ ಈ ಕ್ರಮ ಸೇನಾ ವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಪೌರಾಡಳಿತದ ಪ್ರಧಾನ ನಿರ್ದೇಶಕರ ಸ್ಥಾನಮಾನ ಇದುವರೆಗೆ ಬ್ರಿಗೇಡಿಯರ್ ಹುದ್ದೆಯ ಸ್ಥಾನಮಾನಕ್ಕೆ ಸಮವಾಗಿತ್ತು. ಇದೀಗ ‘ಎರಡು ನಕ್ಷತ್ರ’ಜನರಲ್ ಹುದ್ದೆಯನ್ನು ಈ ಹುದ್ದೆಗೆ ಸಮನಾಗಿಸಿದೆ. ನಿರ್ದೇಶಕರ ಶ್ರೇಣಿಯ ಅಧಿಕಾರಿಯನ್ನು ಬ್ರಿಗೇಡಿಯರ್ ಹುದ್ದೆಯ ಸ್ಥಾನಮಾನಕ್ಕೆ ಮತ್ತು ಜಂಟಿ ನಿರ್ದೇಶಕರನ್ನು ಕರ್ನಲ್ ಹುದ್ದೆಗೆ ಸಮವಾಗಿಸಿ ರಕ್ಷಣಾ ಸಚಿವಾಲಯ ಪತ್ರ ಬರೆದಿದೆ. ಇದುವರೆಗೆ ಕರ್ನಲ್ ಮತ್ತು ನಿರ್ದೇಶಕರ ಹುದ್ದೆ ಸಮಾನವಾಗಿದ್ದರೆ, ಲೆಫ್ಟಿನೆಂಟ್ ಕರ್ನಲ್ ಮತ್ತು ಜಂಟಿ ನಿರ್ದೇಶಕರ ಹುದ್ದೆ ಸಮಾನವಾಗಿತ್ತು. ಸೇನಾ ಅಧಿಕಾರಿಗಳು ಮತ್ತು ಸೇನೆಯ ಪ್ರಧಾನ ಕಚೇರಿಯ ಪೌರ ಅಧಿಕಾರಿಗಳ ಶ್ರೇಣಿಯಲ್ಲಿರುವ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ವಿವರವಾದ ಪರಿಶೀಲನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. ಹುದ್ದೆಯ ಸಮಾನತೆಯು ಜವಾಬ್ದಾರಿ ಹಂಚುವಿಕೆ, ತರಬೇತಿ ಕಾರ್ಯಕ್ರಮಗಳಿಗೆ ಅಧಿಕಾರಿಗಳ ನಿಯೋಜನೆ, ಸ್ಟೆನೋಗ್ರಾಫಿಕ್ ಸಹಾಯಕರ ಒದಗಿಸುವಿಕೆ ಮುಂತಾದ ಕ್ಷೇತ್ರಗಳಿಗೆ ಅನ್ವಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸೇನೆಯ ಕ್ಯಾಪ್ಟನ್ ಮತ್ತು ಗ್ರೂಫ್ ಬಿ ಸೆಕ್ಷನ್ ಅಧಿಕಾರಿಯ ಹುದ್ದೆ ಇನ್ನು ಮುಂದೆ ಸಮಾನ ಶ್ರೇಣಿಯದ್ದಾಗಿರುತ್ತದೆ. ಇದು ಕೇವಲ ಕುಚೋದ್ಯ ಮಾತ್ರವಲ್ಲ, ಕುಚೋದ್ಯದ ಜೊತೆ ಅಧಿಕಾರಶಾಹಿತ್ವದ ಪ್ರದರ್ಶನವಾಗಿದೆ ಎಂದು ಗುರುತು ಬಹಿರಂಗಪಡಿಸಲು ಬಯಸದ ಸೇನಾಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
ಸರಕಾರ ಕಳಿಸಿರುವ ಪತ್ರಕ್ಕೆ ಇಲಾಖೆಯ ಜಂಟಿ ನಿರ್ದೇಶಕರು ಸಹಿ ಹಾಕಿದ್ದಾರೆ. 2003ರಿಂದ 2008ರವರೆಗಿನ ಅವಧಿಯಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳು ಜಾರಿ ಮಾಡಿರುವ ಆಡಳಿತಾತ್ಮಕ ಆದೇಶಗಳ ಪ್ರಸ್ತಾವನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಪತ್ರಗಳು ಸೇನೆಯ ಆಂತರಿಕ ಆಡಳಿತ ವಿಷಯಕ್ಕೆ ಸಂಬಂಧಿಸಿದ್ದು. ಸರಕಾರ ಉದ್ದೇಶಪೂರ್ವಕವಾಗಿ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಕೋರ್ಟ್ ಆದೇಶ ಮತ್ತು ಅನುಕ್ರಮ ವೇತನಾ ಆಯೋಗದ ವರದಿಯನ್ವಯ ಸ್ಥಾಪಿತ ಶಿಷ್ಟಾಚಾರವನ್ನು ವ್ಯತಿರಿಕ್ತಗೊಳಿಸುವ ಆದೇಶವಿದು ಎಂದು ಓರ್ವ ಸೇನಾ ಅಧಿಕಾರಿ ತಿಳಿಸಿದ್ದಾರೆ. ಪ್ರಣಬ್ ಮುಖರ್ಜಿ ನೇತೃತ್ವದ 6ನೇ ವೇತನ ಆಯೋಗದ ವರದಿಯ ಅಧ್ಯಯನ ಸಮಿತಿಯ ಶಿಫಾರಸಿಗೆ ವಿರುದ್ಧವಾಗಿದೆ ಎಂದವರು ಟೀಕಿಸಿದ್ದಾರೆ. 7ನೇ ವೇತನ ಆಯೋಗದ ವರದಿ ಮತ್ತು ಒಆರ್‌ಒಪಿ (ಒನ್ ರ್ಯಾಂಕ್ ಒನ್ ಪೆನ್ಷನ್) ವರದಿಯ ಬಗ್ಗೆ ರಕ್ಷಣಾ ಇಲಾಖೆ ಮತ್ತು ಸೇನಾ ಪಡೆಯ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಇರುವ ನಡುವೆಯೇ ಸರಕಾದ ಈ ಪತ್ರ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.







