ಭರ್ಜರಿ ಜಯ ಗಳಿಸಿದ ಭಾರತ ಸೆಮಿಫೈನಲ್‌ಗೆ
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ

ಹೊಸದಿಲ್ಲಿ, ಅ.25: ಆಕಾಶ್‌ದೀಪ್ ಸಿಂಗ್(9,39ನೆ ನಿಮಿಷ), ಅಫ್ಫಾನ್ ಯೂಸುಫ್(19, 40 ನಿ.) ಹಾಗೂ ಜಸ್ಜೀತ್ ಸಿಂಗ್ (22,51ನೆ ನಿ.)ಬಾರಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಭಾರತದ ಹಾಕಿ ತಂಡ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚೀನಾ ತಂಡವನ್ನು 9-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲಿಸಿದೆ.
ಟೂರ್ನಿಯಲ್ಲಿ ಮೂರನೆ ಗೆಲುವು ಸಾಧಿಸಿರುವ ಭಾರತ ಸೆಮಿ ಫೈನಲ್‌ಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಬುಧವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾವನ್ನು ಎದುರಿಸಲಿದೆ. ಮಲೇಷ್ಯಾ ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿ ಒಟ್ಟು 9 ಅಂಕ ಗಳಿಸಿದೆ. ಎರಡೂ ತಂಡಗಳು ರೌಂಡ್ ರಾಬಿನ್ ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿವೆ.
ಮಂಗಳವಾರ ಇಲ್ಲಿ ನಡೆದ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತ ತಂಡ ಗೋಲುಗಳ ಸುರಿಮಳೆಗರೆಯಿತು. 10ನೆ ಗೋಲು ಬಾರಿಸಿ ಜಪಾನ್ ವಿರುದ್ಧ ಇದೇ ಟೂರ್ನಿಯಲ್ಲಿ ದಾಖಲಿಸಿದ್ದ ಸಾಧನೆ ಸರಿಗಟ್ಟಲು ವಿಫಲವಾಯಿತು. 9ನೆ ನಿಮಿಷದಲ್ಲಿ ಗೋಲು ಬಾರಿಸಿದ ಆಕಾಶ್‌ದೀಪ್ ಸಿಂಗ್ ಭಾರತದ ಗೋಲು ಖಾತೆ ತೆರೆದರು. 19ನೆ ನಿಮಿಷದಲ್ಲಿ ಅಫ್ಘಾನ್ ಯೂಸುಫ್ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. 22ನೆ ನಿಮಿಷದಲ್ಲಿ ಜಸ್ಜಿತ್ ಸಿಂಗ್ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 3-0ಗೆ ಏರಿಸಿದರು. 25ನೆ ನಿಮಿಷದಲ್ಲಿ ಗೋಲು ಬಾರಿಸಿದ ರೂಪಿಂದರ್ ಪಾಲ್ ಸಿಂಗ್ ಭಾರತ ಮೊದಲಾರ್ಧದಲ್ಲಿ 4-0 ಮುನ್ನಡೆ ಸಾಧಿಸಲು ನೆರವಾದರು.
ದ್ವಿತೀಯಾರ್ಧದಲ್ಲಿ ಕನ್ನಡಿಗ ನಿಕಿನ್ ತಿಮ್ಮಯ್ಯ(34ನೆ ನಿಮಿಷ) ಹಾಗೂ ಯುವ ಆಟಗಾರ ಲಲಿತ್ ಉಪಾಧ್ಯಾಯ(37ನೆ ನಿ.) ತಲಾ ಒಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 6-0ಗೇರಿಸಿದರು.
39ನೆ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ 2ನೆ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. 40ನೆ ನಿಮಿಷದಲ್ಲಿ ಯೂಸುಫ್ ಬಾರಿಸಿದ ಗೋಲಿನ ನೆರವಿನಿಂದ ಭಾರತ 8-0 ಮುನ್ನಡೆ ಪಡೆಯಿತು. ಯೂಸುಫ್ ಪಂದ್ಯದಲ್ಲಿ ಬಾರಿಸಿದ ಎರಡನೆ ಗೋಲು ಇದಾಗಿತ್ತು.
51ನೆ ನಿಮಿಷದಲ್ಲಿ ಜಸ್ಜಿತ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ 9-0 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.







