ನಾನೋರ್ವ ದಲಿತ ವಿದ್ಯಾರ್ಥಿ, ಹೆಚ್ಚು ಅಂಕ ಗಳಿಸಿದ್ದೇ ನನ್ನ ಅಪರಾಧ!
► ತರಗತಿಯೊಳಗೆ ಬರ್ಬರವಾಗಿ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿಯ ಅಳಲು ►ಭಯದಿಂದ ಕೊನೆಗೂ ಶಾಲೆ ತೊರೆಯಬೇಕಾಯಿತು!

ಮುಝಾಪರ್‌ನಗರ(ಬಿಹಾರ) ಅ.25: ಮುಝಾಫರ್‌ನಗರ ಸರಕಾರಿ ಶಾಲೆಯ ದಲಿತ ವಿದ್ಯಾರ್ಥಿಯೊಬ್ಬನಿಗೆ ತರಗತಿಯೊಳಗೆ ಆತನ ಸಹಪಾಠಿಗಳು ಬರ್ಬರವಾಗಿ ಥಳಿಸಿ, ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ದೃಶ್ಯಾವಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂಬಂಧ ತನಿಖೆಯೂ ನಡೆಯುತ್ತಿದೆ. ಇದರ ಹಿನ್ನೆಲೆಯನ್ನು ಇದೀಗ ಆ ವಿದ್ಯಾರ್ಥಿಯೇ ದೇಶದ ಮುಂದೆ ತೆರೆದಿಟ್ಟಿದ್ದಾರೆ. ನಾನೋರ್ವ 16ರ ಹರೆಯದ ದಲಿತ .ಮುಝಾಪರ್‌ನಗರದ ಸರಕಾರೀ ಶಾಲೆಯ ವಿದ್ಯಾರ್ಥಿ. ನನಗೆ ಕ್ಲಾಸಿನಲ್ಲಿ ಚಿತ್ರಹಿಂಸೆ ನೀಡುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ . ನನ್ನನ್ನು ಹಾಗೇಕೆ ಕ್ರೂರವಾಗಿ ಥಳಿಸಲಾಯಿತು ಮತ್ತು ನಾನೇಕೆ ಇದುವರೆಗೆ ವೌನವಾಗಿ ಸಹಿಸಿಕೊಂಡಿದ್ದೆ ಎಂದು ಹಲವರು ನನ್ನನ್ನು ಕೇಳಿದ್ದರು. ನನ್ನನ್ನು ಥಳಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾ ಡಿದಂದಿನಿಂದ ಪೊಲೀಸರಿಗೆ, ಶಾಲೆಯ ಸಹಪಾಠಿಗಳಿಗೆ, ಮಾಧ್ಯಮದವರಿಗೆ ಹೇಳಿದ್ದನ್ನೇ ಹೇಳಿ ಸುಸ್ತಾಗಿದ್ದೇನೆ ಮತ್ತು ಹತಾಶೆಗೊಂಡಿದ್ದೇನೆ. ನನ್ನ ತಂದೆ ಓರ್ವ ಶಿಕ್ಷಕ. ಅವರು ನನಗಿಟ್ಟ ಹೆಸರಿನ ಅರ್ಥ ‘ಅತೀ ಉತ್ತಮ’ . ಅವರು ಇತರೆಲ್ಲರಿಗಿಂತ ನಾನು ಉತ್ತಮ ವ್ಯಕ್ತಿಯಾಗಬೇಕು ಎಂದು ಬಯಸಿದ್ದರು. ಆದ್ದರಿಂದಲೇ ಅವರು ಹಳ್ಳಿಯಲ್ಲೇ ನನ್ನ ಇಬ್ಬರು ಸೋದರಿಯರೊಂದಿಗೆ ಇದ್ದು ನನ್ನನ್ನು ಮುಝಾಫರ್‌ನಗರದಲ್ಲಿರುವ ಅಜ್ಜಿಮನೆಗೆ ಕಳಿಸಿದರು. ನಾನಲ್ಲಿ ಉತ್ತಮ ಶಿಕ್ಷಣ ಪಡೆಯಬೇಕೆಂಬುದು ಅವರ ಇರಾದೆಯಾಗಿತ್ತು. ತಂದೆಯ ನಿರೀಕ್ಷೆಯನ್ನು ಹುಸಿಗೊಳಿಸಬಾರದು ಎಂದು ದೃಢ ನಿಶ್ಚಯ ಮಾಡಿಕೊಂಡಿದ್ದೆ. ಈ ನಿಟ್ಟಿನಲ್ಲಿ ನಾನು ಪರಿಶ್ರಮಪಟ್ಟು ಅಭ್ಯಾಸ ಮಾಡತೊಡಗಿದೆ. ನಾನು ಗಳಿಸಿದ ಅಂಕಗಳು ತಂದೆಯನ್ನು ಪ್ರಸನ್ನಗೊಳಿಸಿದರೂ, ನನಗೆ ಅಗ್ನಿಪರೀಕ್ಷೆ ತಂದಿಟ್ಟಿತು ಮತ್ತು ನನ್ನನ್ನು ಏಕಾಂಗಿಯಾಗಿಸಿತು. ನಿಮಗೆ ತಿಳಿದಿರಬಹುದು.. ನಾನೋರ್ವ ದಲಿತ. ಆದ್ದರಿಂದ ಪರೀಕ್ಷೆ ಅಥವಾ ಶೈಕ್ಷಣಿಕ ರಂಗದಲ್ಲಿ ಉತ್ತಮ ನಿರ್ವಹಣೆ ತೋರಿದ್ದು ಮನೆಯಲ್ಲಿ ಖುಷಿ ತಂದರೂ ಕ್ಲಾಸ್‌ರೂಂನಲ್ಲಿ ನನ್ನ ತೇಜೋವಧೆ ಮಾಡಿ ಹೀಯಾಳಿಸಲಾಯಿತು. ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಇಬ್ಬರು ಸಹ ವಿದ್ಯಾಥಿಗಳು ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾರೆ. ಓರ್ವ ನನ್ನ ತರಗತಿಯವ. ಇನ್ನೋರ್ವ ನನಗಿಂತ ಕಿರಿಯವ. ವಾರಕ್ಕೊಂದು ಬಾರಿಯಾದರೂ ನನ್ನ ಮುಖದ ಮೇಲೆ ಉಗಿಯದಿದ್ದರೆ ಅವರಿಗೆ ಸಮಾಧಾನವಾಗದು. ಈ ಬಗ್ಗೆ ಶಿಕ್ಷಕರಲ್ಲಿ ಹೇಳಿದಾಗ ಅವರು ನನ್ನ ಬಗ್ಗೆ ಕರುಣೆ ವ್ಯಕ್ತಪಡಿಸಿದರು. ಆದರೆ ಆ ಬಾಲಕರ ತಂದೆ ಓರ್ವ ಕುಖ್ಯಾತ ಕ್ರಿಮಿನಲ್ ಆಗಿರುವ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಶಾಲೆಯ ಆಡಳಿತವರ್ಗದವರಿಗಿಲ್ಲ. ಅಲ್ಲದೆ ಒಂದು ವೇಳೆ ನಾನು ಕಂಪ್ಲೇಂಟ್ ಕೊಟ್ಟರೆ ನನ್ನನ್ನೇ ಶಾಲೆಯಿಂದ ವಜಾಗೊಳಿಸಲಾಗುತ್ತದೆ ಎಂದು ಅವರು ಹೇಳಿದರು. ಆ ವ್ಯಕ್ತಿ ನನ್ನ ಕುಟುಂದವರಿಗೇನಾದರೂ ಅಪಾಯ ಮಾಡಿಯಾನು ಎಂಬ ಹೆದರಿಕೆಯಿಂದ ನಾನೂ ಸುಮ್ಮನಾಗಿ ಬಿಟ್ಟೆ. ಈಗ ಪೊಲೀಸ್ ಕೇಸು ದಾಖಲಾಗಲು ಕಾರಣವಾದ ವಿಡಿಯೋ ದೃಶ್ಯಾವಳಿ ವಿಷಯದತ್ತ ಬರೋಣ. ಬಹುಷಃ ಇದನ್ನು ಆಗಸ್ಟ್ 25ರಂದು ಚಿತ್ರೀಕರಿಸಲಾಗಿತ್ತು. ನಿನ್ನನ್ನು ಥಳಿಸುವುದರಿಂದ ನನಗೆ ಪರಮಾನಂದವಾಗುತ್ತದೆ ಎಂದು ಹೇಳಿದ ಆ ಇಬ್ಬರು ಸೋದರರ ಪೈಕಿ ಓರ್ವ, ತನ್ನ ಸಹಪಾಠಿ ಕೈಯಲ್ಲಿ ಮೊಬೈಲ್ ಕೊಟ್ಟು , ನನ್ನನ್ನು ಥಳಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸುವಂತೆ ತಿಳಿಸಿದ್ದ . ನಾನು ಅವನಿಗಿಂತ ಹೆಚ್ಚು ಅಂಕ ಗಳಿಸಿದ್ದು ಅವನ ರೋಷಕ್ಕೆ ಕಾರಣವಾಗಿತ್ತು ಮತ್ತು ನಾನು ದಲಿತನಾಗಿಯೂ ಅವನಿಗಿಂತ ಹೆಚ್ಚು ಅಂಕ ಗಳಿಸಿರುವುದು ಅವನ ಕ್ರೋಧಾಗ್ನಿ ಉಕ್ಕಲು ಪ್ರಧಾನ ಕಾರಣವಾಗಿತ್ತು.





