‘ಹಿಂದುತ್ವ’: ಮರು ಚರ್ಚೆಗೆ ಸುಪ್ರೀಂ ನಿರಾಕರಣೆ
.jpg)
ಹೊಸದಿಲ್ಲಿ,ಅ.25: ಹಿಂದುತ್ವ ಅಥವಾ ಹಿಂದುವಾದವನ್ನು ಒಂದು ‘ಜೀವನ ವಿಧಾನ’ವಾಗಿದೆ ಮತ್ತು ಸಂಕುಚಿತ ಮನೋಭಾವನೆಯ ಮೂಲಭೂತವಾದಿ ಹಿಂದು ಧರ್ಮಾಂಧತೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವ್ಯಾಖ್ಯಾನಿಸಿರುವ ತನ್ನ 1995ರ ತೀರ್ಪಿನ ‘ವಿನಾಶಕಾರಿ ಪರಿಣಾಮಗಳನ್ನು ’ ಪರಿಶೀಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರು ಮಾಡಿಕೊಂಡಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಸರ್ವೋಚ್ಚ ನ್ಯಾಯಾಲಯವು ಸದ್ಯ ಯಾವುದು ಚುನಾವಣಾ ಭ್ರಷ್ಟಾಚರವಾಗುತ್ತದೆ ಎನ್ನುವುದನ್ನು ಮಾತ್ರ ಜನತಾ ಪ್ರಾತಿನಿಧ್ಯ ಕಾಯ್ದೆ,1951ರಡಿ ಪರಿಶೀಲಿಸುತ್ತಿದೆ ಮತ್ತು ಹಿಂದುತ್ವವೆಂದರೆ ಹಿಂದು ಧರ್ಮವೇ ಎಂಬ ವಿಶಾಲ ಆಯಾಮದ ವಿಷಯವನ್ನು ತಾನು ಚರ್ಚಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ನೇತೃತ್ವದ ಸಪ್ತ ನ್ಯಾಯಾಧೀಶ ಪೀಠವು ಸ್ಪಷ್ಟಪಡಿಸಿತು.
ನಿರ್ದಿಷ್ಟವಾಗಿ,ಅಭ್ಯಥಿಯೋರ್ವ ಮತಗಳನ್ನು ಸೆಳೆಯಲು ಪ್ರಚಾರಕ್ಕೆ ಧಾರ್ಮಿಕ ನಾಯಕರ ಸೇವೆಯನ್ನು ಬಳಸಿಕೊಂಡರೆ ಅದು ಚುನಾವಣಾ ಭ್ರಷ್ಟಾಚಾರವಾಗುತ್ತದೆಯೇ ಎಂಬ ಬಗ್ಗೆ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ.
ಹಿಂದುತ್ವವನ್ನು ವ್ಯಾಖ್ಯಾನಿಸಿ 1995,ಡಿ.11ರಂದು ನ್ಯಾ.ಜೆ.ಎಸ್.ವರ್ಮಾ ಅವರು ನೀಡಿದ್ದ ತೀರ್ಪು ಹಿಂದುತ್ವವು ರಾಷ್ಟ್ರೀಯವಾದದ ಮತ್ತು ಪೌರತ್ವದ ಸಂಕೇತವಾಗಲು ಕಾರಣವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿರುವ ಸೆತಲ್ವಾಡ್,ರಂಗಕರ್ಮಿ ಹಾಗೂ ಲೇಖಕಿ ಶಮ್ಸುಲ್ ಇಸ್ಲಾಮ್ ಮತ್ತು ಹಿರಿಯ ಪತ್ರಕರ್ತ ದಿಲೀಪ್ ಮಂಡಲ್ ಅವರು, ಇತಿಹಾಸ,ಸಂಸ್ಕೃತಿ,ಸಾಮಾಜಿಕ ಅಧ್ಯಯನ ಮತ್ತು ಕಾನೂನಿನ ‘ಸಂಕುಚಿತ ಮತ್ತು ಸರ್ವೋಚ್ಚ ಮನೋಭಾವನೆಯ’ ವ್ಯಾಖ್ಯಾನಗಳು ರಾಷ್ಟ್ರೀಯತೆಯ ಬುನಾದಿಗಳಿಗೆ ಬೆದರಿಕೆಯೊಡ್ಡುತ್ತಿರುವ ಕವಲುದಾರಿಗಳಲ್ಲಿ ಭಾರತವು ಇಂದು ನಿಂತಿದೆ ಎಂದು ಹೇಳಿದ್ದರು. ರಮೇಶ ಯಶವಂತ ಪ್ರಭು ವಿರುದ್ಧ ಪ್ರಭಾಕರ ಕೆ.ಕುಂಟೆ ಪ್ರಕರಣದಲ್ಲಿ ನೀಡಲಾಗಿರುವ ಈ ತೀರ್ಪಿನ ’ವಿನಾಶಕಾರಿ ಪರಿಣಾಮಗಳನ್ನು’ ನಿವಾರಿಸುವಂತೆ ಅವರು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದರು.





