ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಧರಣಿ

ಮಣಿಪಾಲ, ಅ.25: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜಿಲ್ಲೆಯ ಮರಳು ಸಮಸ್ಯೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯವನ್ನು ಖಂಡಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ನೇತ್ವತದಲ್ಲಿ ಬಿಜೆಪಿಯ ವಿವಿಧ ಸಂಘಟನೆಗಳು ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದವು.
ಈ ಧರಣಿೆಯಲ್ಲಿ ಭಾಗವಹಿಸಿದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಮರಳಿನ ಕೊರತೆಗೆ ಆಡಳಿತದ ವೈಫಲ್ಯ, ಭ್ರಷ್ಟಾಚಾರ ಹಾಗೂ ಪಕ್ಷಪಾತ ಧೋರಣೆಯೇ ಕಾರಣ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಹಣ ತರುವ ಇಲಾಖೆಗೆ ಹೆಚ್ಚು ನೀಡಿ, ಜನಸಾಮಾನ್ಯರ ಸಂಕಷ್ಟಗಳತ್ತ ತಾತ್ಸಾರ ಹಾಗೂ ಉಡಾಫೆ ಪ್ರವೃತ್ತಿಯನ್ನು ತೋರುತ್ತಿದೆ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರ ಜನರ ನೋವನ್ನು ಅರ್ಥಮಾಡಿಕೊಳ್ಳದೇ ಸ್ವೇಚ್ಛಾಚಾರದಿಂದ ವರ್ತಿಸುತ್ತಿದೆ. ಈ ಸರಕಾರ ನಿಷ್ಕೃಿಯವಾಗಿದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿಯ ಬಗ್ಗೆ ಮೂರು ವರ್ಷಗಳಿಂದ ಮಾತನಾಡಿದರೂ ಏನೂ ಮಾಡದೇ ಸುಮ್ಮನಿದೆ. ಜನರ ಗೋಳನ್ನು ಕೇಳುವವರಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ರಾಜ್ಯ ಸರಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದರು. ಮರಳುಗಾರಿಕೆ ಗೊಂದಲ, ಬಡವರಿಗೆ ಸಿಗದ ಹಕ್ಕುಪತ್ರ, ಹದಗೆಟ್ಟ ಕಾನೂನು ವ್ಯವಸ್ಥೆ, ಜನರಿಗೆ ತಲುಪದ ಯೋಜನೆಗಳ ಕುರಿತು ಮಾತನಾಡಿ ಈ ಸರಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ ಎಂದರು.
ಕೊನೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಅರ್ಪಿಸಲಾಯಿತು. ಧರಣಿಯಲ್ಲಿ ಬಿಜೆಪಿ ಮುಖಂಡರಾದ ದಿನಕರ ಬಾಬು, ಉದಯಕುಮಾರ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಶೀಲಾ ಕೆ.ಶೆಟ್ಟಿ, ಶ್ಯಾಮಲಾ ಕುಂದರ್ ಮುಂತಾದವರು ಉಪಸ್ಥಿತರಿದ್ದರು.







