ಭಾರತದಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲು ಪಾಕ್ ನಿರ್ಧಾರ

ಇಸ್ಲಾಮಾಬಾದ್, ಅ. 25: ಭಾರತದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಕುರಿತ ‘ಹಾರ್ಟ್ ಆಫ್ ಏಶ್ಯ’ ಸಮ್ಮೇಳನದಲ್ಲಿ ಭಾಗವಹಿವುದಾಗಿ ಪಾಕಿಸ್ತಾನ ಹೇಳಿದೆ.
ಭಾರತ-ಪಾಕ್ ಗಡಿಯಲ್ಲಿ ಪ್ರತಿ ದಿನ ಗುಂಡಿನ ವಿನಿಮಯ ನಡೆಯುತ್ತಿದ್ದು, ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ಹೊರತಾಗಿಯೂ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಡಿಸೆಂಬರ್ 4ರಂದು ಅಮೃತಸರದಲ್ಲಿ ಸಮ್ಮೇಳನ ನಡೆಯಲಿದೆ.
ರಶ್ಯ, ಚೀನಾ ಮತ್ತು ಟರ್ಕಿ ಸೇರಿದಂತೆ 14 ಸದಸ್ಯ ರಾಷ್ಟ್ರಗಳ ವಿದೇಶ ಸಚಿವರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಅಫ್ಘಾನಿಸ್ತಾನದ ಪ್ರಸಕ್ತ ಸ್ಥಿತಿಗತಿ ಹಾಗೂ ಅಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು.
ಸಮ್ಮೇಳನದಲ್ಲಿ ಪಾಕಿಸ್ತಾನ ಭಾಗವಹಿಸುವುದು ಎಂದು ಪಾಕಿಸ್ತಾನಿ ಪ್ರಧಾನಿಯ ವಿದೇಶ ವ್ಯವಹಾರಗಳ ಕುರಿತ ಸಲಹಾಕಾರ ಸರ್ತಾಝ್ ಅಝೀಝ್ ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು.
ಉರಿ ದಾಳಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ಭಾರತದ ಪ್ರಯತ್ನಗಳನ್ನು ವಿಫಲಗೊಳಿಸುವುದಕ್ಕಾಗಿ ಸಮ್ಮೇಳನದಲ್ಲಿ ಭಾಗವಹಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.





