ಪೊಲೀಸ್ ಇಲಾಖೆಯ ಸಲಹೆ ಪಡೆಯಿರಿ: ಕಮಿಷನರ್

ಮಂಗಳೂರು, ಅ. 25: ನಗರದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಪೊಲೀಸ್ ಇಲಾಖೆಯ ಸಲಹೆಗಳನ್ನು ಪಡೆದುಕೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದ್ದಾರೆ.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಸಂಚಾರಿ ನಿಯಮ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮಂಗಳವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ, ಚರಂಡಿ ಹಾಗೂ ಇತರ ಯಾವುದೇ ಕಾಮಗಾರಿ ನಡೆಸುವಾಗ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿದರೆ ಅಭಿವೃದ್ಧಿಗೆ ಪೂರಕವಾಗಬಹುದು. ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ಮೂಡಾದೊಂದಿಗೂ ಮಾತುಕತೆ ನಡೆಸಲಾಗಿತ್ತು. ಪೊಲೀಸ್ ಇಲಾಖೆಯ ನಡೆಸಿದ ಫೋನ್‌ಇನ್ ಕಾರ್ಯಕ್ರಮದಲ್ಲೂ ಶೇ. 90 ರಷ್ಟು ದೂರುಗಳು ಸಂಚಾರ ವಿಷಯಕ್ಕೆ ಸಂಬಂಧಿಸಿ ಬಂದಿದ್ದವು. ನಗರದ ಕೆಲವೆಡೆ ಅಗಲವಿಲ್ಲದ ರಸ್ತೆಗಳಲ್ಲೂ ಎರಡೂ ಕಡೆಗಳಿಂದ ವಾಹನಗಳು ಚಲಿಸಬೇಕಾದ ಪರಿಸ್ಥಿತಿ ಇದೆ. ಪೊಲೀಸರು ಈ ಸಂದರ್ಭಗಳಲ್ಲಿ ಸಂಚಾರ ನಿಭಾಯಿಸುತ್ತಾರಾದರೂ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಂದ ತೊಂದರೆ ತಪ್ಪಿದ್ದಲ್ಲ ಎಂದರು.
ನಮ್ಮಲ್ಲಿ ಸರಿಯಾದ ರೀತಿಯ ನಗರ ಯೋಜನೆ ಅಗತ್ಯವಿದೆ. ಇದರೊಂದಿಗೆ ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಸಂಚಾರ ನಿಯಮಗಳನ್ನು ವ್ಯವಸ್ಥಿತ ರೂಪದಲ್ಲಿ ಪಾಲಿಸಬೇಕು. ಯಾವುದೇ ಬಲವಂತವಾದ ಅನುಷ್ಠಾನದ ಮೂಲಕ ನಿಯಮಗಳನ್ನು ಪಾಲಿಸುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಜನರು ಕಾನೂನಿಗೆ ಹೆದರಬೇಕೇ ಹೊರತು ಪೊಲೀಸರಿಗೆ ಹೆದರಬೇಕಾಗಿಲ್ಲ. ಪೊಲೀಸರೊಂದಿಗೆ ಉತ್ತಮ ಸಂಪರ್ಕ ಹಾಗೂ ಸಹಕಾರದಿಂದ ಅಭಿವೃದ್ಧಿ ಸಾಧ್ಯ. ಮಂಗಳೂರು ಸಿಟಿ ಪೊಲೀಸ್ ಆ್ಯಪ್ ಹೊಂದಿದ್ದು, ಟ್ವಿಟ್ಟರ್ ಖಾತೆಯನ್ನೂ ತೆರೆಯಲಾಗಿದೆ. ಯಾವುದೇ ನ್ಯಾಯ ಸಮ್ಮತವಲ್ಲದ, ಕಾನೂನು ಬಾಹಿರ ವಿಷಯಗಳ ವಿರುದ್ಧ ಧ್ವನಿ ಎತ್ತಿ, ನ್ಯಾಯಪರವಾಗಿರಿ ಎಂದರು.
ಕಾರ್ಯಕ್ರಮದಲ್ಲಿ ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನ, ಉಪಾಧ್ಯಕ್ಷೆ ವತಿಕಾ ಪೈ, ಕಾರ್ಯದರ್ಶಿಗಳಾದ ಪ್ರವೀಣ ಕುಮಾರ್ ಕಲ್ಬಾವಿ, ಪಿ.ಬಿ. ಸಅಬ್ದುಲ್ ಹಮೀದ್, ಖಜಾಂಚಿ ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.







