ಓವಲ್ ಕಚೇರಿಯಲ್ಲಿ ರಿಯಾಲಿಟಿ ಶೋ ನಡೆಯುವುದಿಲ್ಲ ಟ್ರಂಪ್ ವಿರುದ್ಧ ಒಬಾಮ ವಾಗ್ದಾಳಿ

ವಾಶಿಂಗ್ಟನ್, ಅ. 25: ಅಮೆರಿಕದ ಅಧ್ಯಕ್ಷರು ಕೆಲಸ ನಿರ್ವಹಿಸುವ ಶ್ವೇತಭವನದ ಓವಲ್ ಕಚೇರಿಯಲ್ಲಿ ‘ರಿಯಲಿಟಿ ಟಿವಿ ಕಾರ್ಯಕ್ರಮ’ ನಡೆಸುವುದು ಸಾಧ್ಯವಿಲ್ಲ. ಹಾಗಾಗಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಭಾರೀ ಬಹುಮತದಿಂದ ಗೆಲ್ಲಿಸಬೇಕು ಹಾಗೂ ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಭರ್ಜರಿ ಸೋಲುಣಿಸಬೇಕೆಂದು ಅಮೆರಿಕದ ಅಧ್ಯಕ್ಷ ಒಬಾಮ ಮತದಾರರಿಗೆ ಮನವಿ ಮಾಡಿದ್ದಾರೆ.
ಅಮೆರಿಕದಲ್ಲಿ ನವೆಂಬರ್ 8ರಂದು ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯಲಿದೆ.
70 ವರ್ಷದ ಟ್ರಂಪ್‌ಗೆ ಹೋಲಿಸಿದರೆ, 68 ವರ್ಷದ ಹಿಲರಿ ಅತ್ಯುತ್ತಮ ಅರ್ಹತೆ ಹೊಂದಿದ್ದಾರೆ, ಅತ್ಯುತ್ತಮ ರೀತಿಯಲ್ಲಿ ತಯಾರಿ ನಡೆಸಿದ್ದಾರೆ ಹಾಗೂ ಅವರಲ್ಲಿ ಸರಿಯಾದ ಮನೋಭಾವ, ಕೆಲಸದಲ್ಲಿ ಶ್ರದ್ಧೆ ಹಾಗೂ ಅತ್ಯುತ್ತಮ ಅಧ್ಯಕ್ಷರಿಗೆ ಬೇಕಾದ ಗುಣಗಳು ಅವರಲ್ಲಿವೆ ಎಂದು ಕ್ಯಾಲಿಫೋರ್ನಿಯದಲ್ಲಿ ಸನ್ಮಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಹೇಳಿದರು.
‘‘ಸ್ಪರ್ಧೆಯಲ್ಲಿ ಇನ್ನೊಬ್ಬರಿದ್ದಾರೆ (ಟ್ರಂಪ್). ಈ ವ್ಯಕ್ತಿ ಅಧ್ಯಕ್ಷೀಯ ಕಚೇರಿ ಪ್ರವೇಶಿಸಲು ಯಾಕೆ ಅರ್ಹನಲ್ಲ ಎಂದು ಹೇಳಲು ಹೆಚ್ಚು ಶ್ರಮ ಪಡುವುದಿಲ್ಲ. ಯಾಕೆಂದರೆ, ಅಮೆರಿಕದ ಅಧ್ಯಕ್ಷನಾಗಬೇಕೆಂದು ನೀವು ಬಯಸುವ ವ್ಯಕ್ತಿ ಆ ವ್ಯಕ್ತಿಯಲ್ಲ ಎನ್ನುವುದಕ್ಕೆ ಪುರಾವೆಗಳು ಆ ವ್ಯಕ್ತಿ ಬಾಯಿ ತೆರೆದಾಗಲೆಲ್ಲ ನಿಮಗೆ ಸಿಗುತ್ತಾ ಹೋಗುತ್ತದೆ’’ ಎಂದು ಒಬಾಮ ನುಡಿದರು.





