ಭರವಸೆಯಂತೆ ಪರಿಹಾರ ನೀಡದ ಐಆರ್‌ಬಿ ಕಂಪೆನಿ
ರಾ. ಹೆ. ಚತುಷ್ಪಥ ಕಾಮಗಾರಿ ವೇಳೆ ಅವಘಡ
ಕಾರವಾರ, ಅ.25: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿಯ ನಿರ್ಲಕ್ಷ್ಯದಿಂದ ಕಳೆದ ಜುಲೈ 7ರಂದು ನಡೆದ ಅವಘಡದಿಂದ ಗಾಯಗೊಂಡಿದ್ದ ದಂಪತಿ ಈಗ ಪರಿಹಾರ ಕ್ಕಾಗಿ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ದಾಂಡೇಲಿಯಿಂದ ಕಾರವಾರಕ್ಕೆ ಆಗಮಿಸಿದ ಜಾವೇದ್ ಶೇಕ್ ಹಾಗೂ ರುಕ್ಸಾರ್ ಶೇಕ್ ಅವರು, ಮರಳಿ ತಮ್ಮ ವಾಹನದ ಮೂಲಕ ದಾಂಡೇಲಿಗೆ ಮರಳುತ್ತಿದ್ದಾಗಿ ಸದಾಶಿವಗಡದ ಗುಡ್ಡದಿಂದ ಕಲ್ಲು ಉರುಳಿ ಬಿದ್ದಿದೆ. ಇದರ ಪರಿಣಾಮ ಜಾವೇದ್ ಅವರು ಎಡಗೈ ಹಾಗೂ ರುಕ್ಸಾರ್ ಅವರ ಬಲಗೈ ಮುರಿದಿತ್ತು. ಬಳಿಕ ಜಿಲ್ಲಾಧಿಕಾರಿ ಆದೇಶದಂತೆ ಐಆರ್‌ಬಿ ಕಂಪೆನಿ ಪರಿಹಾರ ನೀಡಬೇಕು ಎಂದು ಆದೇಶ ನೀಡಿದ್ದರಿಂದ ಚಿಕಿತ್ಸೆಗಾಗಿ 60 ಸಾವಿರ ರೂ. ಪಡೆದುಕೊಂಡಿದ್ದರು ಎನ್ನಲಾಗಿದೆ.
ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಂಪೆನಿಯೇ ಭರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ ಈ ದಂಪತಿಗಳ ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಬೇಕಾಗಿದ್ದರಿಂದ ಹೆಚ್ಚಿನ ಪರಿಹಾರ ನೀಡಬೇಕಾ ಗಿದ್ದ ಐಆರ್‌ಬಿ ಕಂಪೆನಿ ಹಣ ನೀಡಲು ಮೀನಮೇಷ ಎಣಿಸುತ್ತಿದೆ. ಮಂಗಳವಾರ ಕಾರವಾರಕ್ಕೆ ಆಗಮಿಸಿದ ರುಕ್ಸಾರ್ ಶೇಕ್ ಹಾಗೂ ಜಾವೇದ್ ಶೇಕ್ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸದಾಶಿವಗಡದ ಗುಡ್ಡದ ಕಲ್ಲು ಕಾರಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ತಮಗೆ ಇದುವರೆಗೆ ಐಆರ್‌ಬಿ ಕಂಪೆನಿಯಿಂದ ಹೆಚ್ಚಿನ ಪರಿಹಾರ ಲಭಿಸಿಲ್ಲ ಎನ್ನುವ ಬಗ್ಗೆ ಗಮನಕ್ಕೆ ತಂದರು.
ಸದ್ಯ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದ್ದು ಕಳೆದ ನಾಲ್ಕು ತಿಂಗಳಿಂದ ಕೆಲಸ ಕಾರ್ಯವಿಲ್ಲದೆ ಖಾಲಿ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ. ತಕ್ಷಣ ಸೂಕ್ತ ಪರಿಹಾರ ಕಲ್ಪಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆಯನ್ನು ಮನವಿಯಲ್ಲಿ ನೀಡಿದ್ದಾರೆ.
ಜಿಲ್ಲಾಡಳಿತ ಐಆರ್‌ಬಿ ಕಂಪೆನಿ ಪರಿಹಾರದ ಹೆಚ್ಚಿನ ಹಣ ತಕ್ಷಣ ನೀಡುವಂತೆ ಸೂಚಿಸಬೇಕು. ಇಲ್ಲದ ಪಕ್ಷದಲ್ಲಿ ಜಿಲ್ಲಾಡಳಿತವೇ ಸೂಕ್ತ ಪರಿಹಾರ ನೀಡಬೇಕು ಎಂದು ದಾಂಡೇಲಿಯ ರುಕ್ಸಾರ್ ಶೇಕ್ ಜಿಲ್ಲಾಡಳಿತಕ್ಕೆ ಸೋಮವಾರ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಭರವಸೆ ಮರೆತ ಕಂಪೆನಿ:
ಕಂಪೆನಿಯ ಅವೈಜ್ಞ್ಞಾನಿಕ ಕಾಮಗಾರಿಯೇ ಈ ದುರಂತಕ್ಕೆ ಕಾರಣವಾಗಿದೆ. ಆ ಸಂದರ್ಭದಲ್ಲಿ ಕಂಪೆನಿಯು ಗಾಯಗೊಂಡ ತಮಗೆ ತುರ್ತು ಚಿಕಿತ್ಸೆ ನೀಡಿ ಕೈ ತೊಳೆದುಕೊಂಡಿತು. ಆದರೆ ಹೆಚ್ಚಿನ ಪರಿಹಾರ ನೀಡುವುದಾಗಿ ನೀಡಿದ ಭರವಸೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಂಪತಿ ಆಗ್ರಹಿಸಿದ್ದಾರೆ.







