ಸರಕಾರಿ ಗೋಮಾಳ ಜಾಗ ಅತಿಕ್ರಮಿಸಿ ಕೃಷಿ
ತಹಶೀಲ್ದಾರ್ ನೇತೃತ್ವದಲ್ಲಿ ಅನಾನಸ್ ಬೆಳೆ ತೆರವು
.jpg)
ಸಾಗರ, ಅ.25: ತಾಲೂಕಿನ ಆವಿನಹಳ್ಳಿ ಗ್ರಾಮದ ಸರ್ವೇ ನಂ. 61ರ ಸರಕಾರಿ ಗೋಮಾಳ ಜಾಗವನ್ನು ಅತಿಕ್ರಮಿಸಿಕೊಂಡು ಅನಾನಸ್ ಬೆಳೆ ಹಾಕಿದ್ದನ್ನು ಸೋಮವಾರ ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ಸರ್ವೇ ನಂ. 61ರ ಗೋಮಾಳ ಜಾಗದಲ್ಲಿ ದಟ್ಟವಾಗಿ ಬೆಳೆದಿದ್ದ ನೂರಾರು ಮರಗಳನ್ನು ಕಡಿದು ಸುಮಾರು 6 ಎಕರೆ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡಲಾಗುತಿತ್ತು. ಈ ಜಮೀನಿನಲ್ಲಿ ಬೆಲೆಬಾಳುವ ಮತ್ತಿ, ಸಾಗುವಾನಿ, ಹಲಸು, ಮಾವು ಇನ್ನಿತರೆ ಮರಗಳು ಇದ್ದವು. ಅತಿಕ್ರಮಣದಾರರು ಕಳೆದ 15 ದಿನಗಳ ಹಿಂದೆ ರಾತ್ರೋರಾತ್ರಿ ಜಮೀನಿನ ಸುತ್ತಲೂ ಬೇಲಿ ಹಾಕಿ, ಅಗಳವನ್ನು ತೆಗೆದು ಅನಾನಸ್ ಬೆಳೆಯನ್ನು ಹಾಕಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಸೋಮವಾರ ತಹಶೀಲ್ದಾರ್ ಎನ್. ಟಿ.ಧರ್ಮೋಜಿರಾವ್ ನೇತೃತ್ವದಲ್ಲಿ ಜೆಸಿಬಿ. ಯಂತ್ರವನ್ನು ಬಳಸಿ ಅತಿಕ್ರಮಣವನ್ನು ತೆರವುಗೊಳಿಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಹೊಸದಾಗಿ ಅತಿಕ್ರಮಣ ಮಾಡಿ ಅದನ್ನು ಬಗರ್‌ಹುಕುಂ ಇನ್ನಿತರ ಹೆಸರಿನಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನ ತಾಲೂಕಿನಲ್ಲಿ ಕೆಲವರು ಮಾಡುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಿ, ಅತಿಕ್ರಮಣದಾರರಿಗೆ ನೋಟಿಸ್ ನೀಡುವ ಜೊತೆಗೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಅತಿಕ್ರಮಣ ತೆರವು ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸರಕಾರಿ ಭೂಮಿಯನ್ನು ಉಳಿಸಿಕೊಳ್ಳುವುದು ತಹಶೀಲ್ದಾರ್ ಆಗಿ ನನ್ನ ಜವಾಬ್ದಾರಿ. ಸರಕಾರಿ ಭೂಮಿ, ಗೋಮಾಳ, ಸೊಪ್ಪಿನ ಬೆಟ್ಟವನ್ನು ನಿರಂತರ ಒತ್ತುವರಿ ಮಾಡಿ, ಅರಣ್ಯ ಹಾಗೂ ಪರಿಸರ ನಾಶ ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವಿಜಯಕುಮಾರ್, ಗ್ರಾಮ ಲೆಕ್ಕಿಗ ಅಶೋಕ್, ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್ ಇನ್ನಿತರರು ಹಾಜರಿದ್ದರು.





