ಕಾರಾಗೃಹ ಶಿಕ್ಷೆ ಇರುವುದು ಮನಪರಿವರ್ತನೆಗಾಗಿ: ಸೋಮಶೇಖರ
ಕಾನೂನು ಅರಿವು ಕಾರ್ಯಕ್ರಮ

ಶಿವಮೊಗ್ಗ, ಅ.25: ಕಾರಾಗೃಹ ಶಿಕ್ಷೆ ತಪ್ಪುಮಾಡಿದವರಿಗೆ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಲು ನೀಡಿರುವ ಒಂದು ಅವಕಾಶ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳದೇ ಹೋದಲ್ಲಿ ಮೃಗಗಳಿಗಿಂತ ಕಡೆಯಾಗುತ್ತಾರೆ. ಜೈಲುಗಳು ಈಗ ಹೊಸ ಸ್ವರೂಪವನ್ನು ಪಡೆದುಕೊಂಡಿವೆ. ಇಲ್ಲಿ ಕೇವಲ ಶಿಕ್ಷೆ ಅನುಭವಿಸುವುದಲ್ಲ ಮನಪರಿವರ್ತನೆಗಳು ಕೂಡ ಮುಖ್ಯವಾಗುತ್ತದೆ. ಯಾವುದೋ ಕಾರಣಕ್ಕಾಗಿ ತಪ್ಪು ಮಾಡಿದವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಜೈಲುಗಳು ಅವಕಾಶ ಕೊಡುತ್ತವೆ ಎಂದರು.
ಸಮಾಜದಲ್ಲಿ ದ್ವೇಷ ಅಳಿಯಬೇಕು. ಸಹೋದರತ್ವ ಮೂಡಬೇಕು, ಚಿಕ್ಕಪುಟ್ಟ ತಪ್ಪು ಮಾಡಿದವರು ತಿದ್ದಿಕೊಳ್ಳಬೇಕು, ಜೈಲುಗಳು ಈಗ ಕೇವಲ ಬಂಧಿಯಾಗಿಲ್ಲ, ಒಳ್ಳೆಯ ವಾತಾವರಣ ಅಲ್ಲಿರುತ್ತದೆ. ಕಾನೂನು ಸೇವಾ ಪ್ರಾಧಿಕಾರವು ಇಡೀ ದೇಶಾದ್ಯಂತ ಎಲ್ಲ ಜೈಲುಗಳಲ್ಲಿ ಪ್ರಾಧಿಕಾರದ ವತಿಯಿಂದಲೇ ವಕೀಲರನ್ನು ನೇಮಿಸುತ್ತದೆ. ನ್ಯಾಯಾಂಗವೂ ಬಂಧಿತರಿಗೆ ತಪ್ಪುತಿದ್ದಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು. ಅನೇಕರಿಗೆ ಬಡತನದ ಕಾರಣ ವಕೀಲರನ್ನು ನೇಮಿಸಿಕೊಳ್ಳಲು ಕೂಡ ಆಗುವುದಿಲ್ಲ. ಕಾನೂನು ಪ್ರಾಧಿಕಾರವು ಇಂಥವರ ನೆರವಿಗೆ ಬರುತ್ತದೆ. ಅದಕ್ಕಾಗಿಯೇ ಜೈಲಿನಲ್ಲಿ ವಕೀಲರು ಇರುತ್ತಾರೆ ಇದರ ಉಪಯೋಗವನ್ನು ವಿಚಾರಣಾಧೀನ ಬಂಧಿಗಳು ಪಡೆಯಬೇಕು. ಈ ಬಗ್ಗೆ ಜೈಲುಗಳಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಮೂರನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ್, ಜೈಲುಗಳು ಕೇವಲ ಶಿಕ್ಷೆಯನ್ನು ಕೊಡುವುದಿಲ್ಲ. ಮನಸ್ಸನ್ನು ಅರಳಿಸುತ್ತವೆ, ಭಾವನಾತ್ಮಕವಾಗಿ ಬೆಳೆಸುತ್ತವೆ, ತಮ್ಮ ತಪ್ಪುಗಳ ಬಗ್ಗೆ ಅರಿವನ್ನು ಮೂಡಿಸುತ್ತವೆ, ಜೀವನದ ವೌಲ್ಯಗಳನ್ನು ಕಲಿಸುತ್ತವೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹ ಅಧೀಕ್ಷಕ ಎ. ಮರಿಗೌಡ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಕಾರಾಗೃಹ ಕಾನೂನು ಸಲಹೆಗಾರ ಡಿ.ಎಸ್. ಶಿವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







