ಫ್ರೆಂಚ್ ಫುಟ್ಬಾಲ್ ದಂತಕತೆ ಹೆನ್ರಿ ಭಾರತಕ್ಕೆ ಆಗಮನ

ಕೋಲ್ಕತಾ, ಅ.25: ಫ್ರೆಂಚ್ ಫುಟ್ಬಾಲ್ ದಂತಕತೆ, 1998ರ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಸದಸ್ಯ ಥಿಯೆರಿ ಹೆನ್ರಿ ಭಾರತದ ಫುಟ್ಬಾಲ್ ರಾಜಧಾನಿ ಕೋಲ್ಕತಾಕ್ಕೆ ಭೇಟಿ ನೀಡಿದ್ದಾರೆ.
ಅಟ್ಲೆಟಿಕೊ ಡಿ ಕೋಲ್ಕತಾ ಹಾಗೂ ಮುಂಬೈ ಸಿಟಿ ಎಫ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಪಂದ್ಯವನ್ನು ವೀಕ್ಷಿಸಲಿರುವ 39ರ ಪ್ರಾಯದ ಹೆನ್ರಿ ಭಾರತದ ಫಾರ್ವರ್ಡ್ ಆಟಗಾರ, ಐಎಸ್‌ಎಲ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಿರುವ ರಾಬಿನ್ ಸಿಂಗ್‌ರೊಂದಿಗೆ ಚಾಟ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಅರ್ಸೆನಲ್ ಕ್ಲಬ್‌ನ ಲೆಜಂಡ್ ಆಟಗಾರ ಹೆನ್ರಿ ದುಬೈ ಮೂಲಕ ಬೆಳಗ್ಗೆ 8:20ಕ್ಕೆ ನಗರಕ್ಕೆ ಆಗಮಿಸಿದರು. ನಗರದ ಸಿಟಿ ಮಾಲ್‌ನಲ್ಲಿರುವ ಸ್ಪೋರ್ಟ್ಸ್ ಬ್ರಾಂಡ್ ಮಳಿಗೆಗೆ ಭೇಟಿ ನೀಡಿದ್ದಾರೆ.
ಫ್ರಾನ್ಸ್‌ನ ಪರ ಅತ್ಯಂತ ಹೆಚ್ಚು 123 ಪಂದ್ಯಗಳನ್ನು ಆಡಿರುವ ಎರಡನೆೆ ಆಟಗಾರನಾಗಿರುವ ಹೆನ್ರಿ ತಂಡದ ಪರ ಗರಿಷ್ಠ ಗೋಲುಗಳನ್ನು (51)ಬಾರಿಸಿದ್ದಾರೆ. 1998ರ ವಿಶ್ವಕಪ್ ಜಯಿಸಿದ ಫ್ರಾನ್ಸ್ ತಂಡದಲ್ಲಿದ್ದ ಹೆನ್ರಿ 2000ರಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಗೆಲ್ಲಲು ನೆರವಾಗಿದ್ದರು.
ಅರ್ಸನೆಲ್ ಕ್ಲಬ್ ಏಳು ಪ್ರಶಸ್ತಿ ಗೆಲ್ಲಲು ನೆರವಾಗಿರುವ ಹೆನ್ರಿ 228 ಗೋಲು ಬಾರಿಸಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿದ್ದಾರೆ. ಬ್ರೆಝಿಲ್ ದಂತಕತೆ ಪೀಲೆ ಕಳೆದ ವರ್ಷ ಕೋಲ್ಕತಾಕ್ಕೆ ಎರಡನೆ ಬಾರಿ ಭೇಟಿ ನೀಡಿದ್ದರು. ಡಿಯಾಗೊ ಮರಡೋನಾ(2008), ಲಿಯೊನೆಲ್ ಮೆಸ್ಸಿ(2011) ಹಾಗೂ ಒಲಿವೆರ್ ಕಾನ್(2008) ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು.







