ನ.7ರೊಳಗೆ ಗಂಗಾನದಿಗೆ ಸೇರುವ ಒಳಚರಂಡಿಗಳ ವರದಿ ನೀಡುವಂತೆ ಎನ್‌ಜಿಟಿ ಆದೇಶ
ಹೊಸದಿಲ್ಲಿ, ಅ.25: ಹರಿದ್ವಾರ ಹಾಗೂ ಉನ್ನಾವೊಗಳ ನಡುವೆ ಗಂಗಾ ನದಿಯನ್ನು ಕೂಡುವ ಒಳಚರಂಡಿಗಳೆಷ್ಟಿವೆಯೆಂಬ ಕುರಿತು ಮಾಹಿತಿ ಸಂಗ್ರಹಿಸಲು ತಾನು ರಚಿಸಿರುವ ಸಮಿತಿಯೊಂದಕ್ಕೆ ನ.7ರೊಳಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ ನೀಡಿದೆ.
ವರದಿಯನ್ನು ನಿಗದಿತ ಗಡುವಿನೊಳಗೆ ಸಲ್ಲಿಸುವಂತೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಉತ್ತರಪ್ರದೇಶ ಜಲ ನಿಗಮದ ಮುಖ್ಯ ಅಭಿಯಂತರ, ಉ.ಪ್ರ. ಮಾಲಿನ್ಯ ನಿಯಂತ್ರಣ ಮಂಡಳಿಯ ಅತಿ ಹಿರಿಯ ಮುಖ್ಯ ಪರಿಸರ ಅಧಿಕಾರಿ ಹಾಗೂ ಜಲಸಂಪನ್ಮೂಲ ಸಚಿವಾಲಯದ ಪ್ರತಿನಿಧಿಯನ್ನೊಳಗೊಂಡ ಸಮಿತಿಗೆ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಆದೇಶಿಸಿದ್ದಾರೆ.
ಹರಿದ್ವಾರದಿಂದ ಉನ್ನಾವೊ ವರೆಗೆ ಗಂಗಾ ನದಿಯನ್ನು ಕೂಡುವ ಒಳಚರಂಡಿಗಳ ವಿವರ ಹಾಗೂ ನದಿಗೆ ಬಿಡುಗಡೆ ಮಾಡಲಾಗುತ್ತಿರುವ ತ್ಯಾಜ್ಯದ ಗುಣಮಟ್ಟ ವಿವರವನ್ನು ವರದಿ ಒಳಗೊಂಡಿರಬೇಕೆಂದು ಎನ್‌ಜಿಟಿ ಸೂಚಿಸಿದೆ.
Next Story





