ಅಖಿಲೇಶ್ ಅದ್ಭುತ ಮುಖ್ಯಮಂತ್ರಿ, ಆದರೆ ಸಮೂಹ ನಾಯಕನಲ್ಲ: ಅಮರ್‌ಸಿಂಗ್
ಲಕ್ನೊ, ಅ.25: ಅಖಿಲೇಶ್ ಯಾದವ್ ಒಬ್ಬರು ಅದ್ಭುತ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಸಮೂಹ ನಾಯಕನಾಗಲು ಅವರಿಗೆ ಸಮಯ ಅಗತ್ಯವಿದೆಯೆಂದು ಎಸ್ಪಿ ನಾಯಕ ಅಮರ್‌ಸಿಂಗ್ ಹೇಳಿದ್ದಾರೆ. ಇದೇ ವೇಳೆ, ಅಮರ್ ಪಕ್ಷವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆಂಬ ಅಖಿಲೇಶ್‌ರ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಭಾರೀ ಅದ್ಭುತವಾಗಿದ್ದಾರೆ. ಆದರೆ, ಸಮೂಹ ನಾಯಕನಾಗಲು ಅವರಿಗೆ ಸಮಯದ ಅಗತ್ಯವಿದೆ. ಪ್ರಥಮ ಬಾರಿಯ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ಮೇಲೆ ಅವರ ಗಮನ, ಅಭಿವೃದ್ಧಿ ಕಾರ್ಯಸೂಚಿ ಮನಮುಟ್ಟುವಂತಿದೆಯೆಂದು ಅಮರ್ ಕೋಲ್ಕತಾದಲ್ಲಿ ಹೇಳಿದರು.
ಅವರು ಸಮೂಹ ನಾಯಕನಲ್ಲವೆಂದು ತಾನು ಹೇಳುತ್ತಿಲ್ಲ. ಆದರೆ, ಸಮೂಹ ನಾಯಕನಾಗಲು ಸಮಯ ಹಿಡಿಯುತ್ತದೆ. ಅವರಿನ್ನೂ ಸಣ್ಣವರು. ಮುಲಾಯಂ ಸಿಂಗ್ ಹಾಗೂ ಯುವಮುಖ ಅಖಿಲೇಶ್‌ರ ಸಂಘಟನಾ ಕೌಶಲ ಹಾಗೂ ಅನುಭವಗಳ ಮಿಶ್ರಣ ಅತ್ಯಗತ್ಯವಾಗಿದೆಯೆಂದು ಅವರು ಅಭಿಪ್ರಾಯಿಸಿದರು.
ಎಸ್ಪಿಯಿಂದ 6 ವರ್ಷ ಹೊರಗಿದ್ದ ಅಮರ್, ಈ ವರ್ಷ ಪಕ್ಷಕ್ಕೆ ಪುನಃ ಸೇರ್ಪಡೆ ಗೊಂಡಿದ್ದಾರೆ. ಉತ್ತರಪ್ರದೇಶದ ಯಾದವ ಕುಟುಂಬವನ್ನು ಆಳವಾಗಿ ಒಡೆದಿರುವ ಹಾಲಿ ಬಿಕ್ಕಟ್ಟಿಗೆ ಅವರ ಚಿತಾವಣೆಯೇ ಕಾರಣವೆಂದು ಅಖಿಲೇಶ್ ಆರೋಪಿಸಿದ್ದರು.





