ಮುಜರಾಯಿ ದೇವಸ್ಥಾನಗಳ ಕಾಯಕಲ್ಪಕ್ಕೆ ಆದ್ಯತೆ: ಸಚಿವ ಲಮಾಣಿ
ಸುಬ್ರಹ್ಮಣ್ಯ, ಅ.25: ರಾಜ್ಯ ಮುಜರಾಯಿ ಇಲಾಖೆಯಡಿಯಲ್ಲಿ ಬರುವ 60ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಈಗಾಗಲೇ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದ್ದು, ಮುಜರಾಯಿ ಇಲಾಖೆ ಅನ್ನುವಂತದ್ದು ತುಂಬಾ ಮುಜುಗರ ಇರುವ ಇಲಾಖೆಯಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಸಿಬ್ಬಂದಿ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆಯಿದ್ದು, ಈ ಖಾತೆಯ ಜವಾಬ್ದಾರಿ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಕಾಯಕಲ್ಪ ನೀಡಲು ಆದ್ಯತೆ ನೀಡುತ್ತೇನೆ ಎಂದು ಜವುಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪಲಮಾಣಿ ಹೇಳಿದರು.
ಕುಟುಂಬ ಸದಸ್ಯರೊಂದಿಗೆ ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ಮಂಗಳವಾರ ಆಗಮಿಸಿದ ಸಚಿವರು ದೇವರ ದರ್ಶನ ಪಡೆದು ದೇವರಿಗೆ ವಿಶೇಷ ಸೇವೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಸ್ಟರ್ ಪ್ಲಾನ್ ಆಡಳಿತಾತ್ಮಕ ಮಂಜೂರಾತಿಗೆ ಶಿೀಘ್ರ ಕ್ರಮ: ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಯ 180 ಕೋ.ರೂ ವೆಚ್ಚದ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಈಗಾಗಲೇ ಮೊದಲ ಹಂತ ಮುಗಿದಿದೆ. ಅಲ್ಲದೆ ತ್ವರಿತವಾಗಿ ಎರಡನೆ ಹಂತದ ಕಾಮಗಾರಿ ಮುಂದುವರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಒಳಚರಂಡಿ ಮತ್ತು ನೀರು ಸರಬರಾಜಿನ ಕಾಮಗಾರಿ ಮುಗಿದಿದ್ದು, ಇದನ್ನು ಉಪಯೋಗಿಸಲು ಅತ್ಯವಶ್ಯಕವಾದ ಪೈಪ್‌ಲೈನ್ ಸಂಪರ್ಕ ಮಾಡಲು ರಸ್ತೆ ಅಗಲೀಕರಣವಾಗದೆ ಕಾಮಗಾರಿ ಕುಂಠಿತಗೊಂಡಿದೆ. ಈ ಕಾರ್ಯವನ್ನು ನೆರವೇರಿಸಲು ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಕುಮಾರಧಾರಾದಿಂದ ರಥಬೀದಿವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಖಾಸಗಿಯವರು ಕೋರ್ಟ್ ಮೆಟ್ಟಿಲೇರಿರುವುದರಿಂದ ಕಾನೂನು ಚೌಕಟ್ಟಿನಲ್ಲಿ ಮಾತುಕತೆ ಮೂಲಕ ಪರಿಹಾರ ನೀಡಿ ಕಾಮಗಾರಿ ಮುಂದುವರಿಸಲಾಗುವುದು ಎಂದರು.
ದೇವಳಕ್ಕೆ ಸಚಿವರೊಂದಿಗೆ ಪತ್ನಿ ಮಂಜುಳಾ, ಮಕ್ಕಳು ಹಾಗೂ ಸಹೋದರರು ಆಗಮಿಸಿದ್ದರು.
ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕುಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್., ರಾಜೀವಿ ಆರ್ ರೈ, ರವೀಂದ್ರನಾಥ್ ಶೆಟ್ಟಿ, ಬಾಲಕೃಷ್ಣ ಗೌಡ ಬಳ್ಳೇರಿ, ಕೆ.ಕೃಷ್ಣಮೂರ್ತಿ ಭಟ್, ದಮಯಂತಿ ಕೂಜುಗೋಡು, ಮಾಧವ.ಡಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಜಗನ್ನಿವಾಸ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವರಾಮ್ ರೈ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಉಪಸ್ಥಿತರಿದ್ದರು.







