ಉಡುಪಿ: ಜಾನುವಾರುಗಳಿಗೆ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ
ಉಡುಪಿ, ಅ.25: ಜಿಲ್ಲೆಯಲ್ಲಿ 2,35,000 ಜಾನುವಾರುಗಳಿಗೆ ಉಚಿತ ಕಾಲು ಬಾಯಿ ರೋಗದ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಗೊಂಡಿದ್ದು, 1 ತಿಂಗಳ ಕಾಲ ಇದು ನಡೆಯಲಿದೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸರ್ವೋತ್ತಮ ಉಡುಪ ತಿಳಿಸಿದ್ದಾರೆ. ಕಾಲುಬಾಯಿ ರೋಗ ಜಾನುವಾರುಗಳಿಗೆ ಮಾರಣಾಂತಿಕ ಕಾಯಿಲೆಯಾಗಿದ್ದು, ರೋಗ ನಿಯಂತ್ರಣಕ್ಕೆ 11 ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 34 ತಂಡಗಳನ್ನು ರಚಿಸಲಾಗಿದ್ದು, ಉಳಿದಂತೆ ಇಲಾಖೆಯಿಂದ ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದವರು ಕೆಡಿಪಿ ಸಭೆಗೆ ಮಾಹಿತಿ ನೀಡಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





