ಅ.28: ‘ಯುನಿವೆಫ್’ನಿಂದ ಸರ್ವ ಧರ್ಮೀಯರೊಂದಿಗೆ ಸ್ನೇಹ ಸಂವಾದ
ಮಂಗಳೂರು, ಅ.25: ಯುನಿವೆಫ್ ಕರ್ನಾಟಕದ ವತಿಯಿಂದ ನಡೆಸಲಾಗುವ ಸ್ನೇಹ ಸಂವಾದ ಕಾರ್ಯಕ್ರಮದ ದಶಮಾನೋತ್ಸವ ಸಮಾರಂಭವು ಅ.28ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಅ.28ರಂದು ಸಂಜೆ 6:30ಕ್ಕೆ ಬಲ್ಮಠದ ಶಾಂತಿ ನಿಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ವರ್ಷ ‘ಸಾಮರಸ್ಯ ಮತ್ತು ಸಹಬಾಳ್ವೆಗೆ ನನ್ನ ಧರ್ಮ ಮಾರಕವೇ?’ ಎಂಬ ವಿಷಯದಲ್ಲಿ ವಿವಿಧ ಧರ್ಮಗಳ ವಿದ್ವಾಂಸರು ಮಾತನಾಡಲಿದ್ದಾರೆ ಎಂದರು. ಉಡುಪಿ ಜನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ, ಬಲ್ಮಠ ಸರಕಾರಿ ಮಹಿಳಾ ಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಪಿ ಜೋಸೆಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಕ್ತ ಪ್ರಶ್ನೋತ್ತರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಯು.ಕೆ.ಖಾಲಿದ್, ಯುನಿವೆಫ್‌ನ ಶೈಕ್ಷಣಿಕ ವಿಭಾಗದ ಸಂಚಾಲಕ ಸಲೀಂ ಮಲಾರ್, ರಾಜ್ಯ ಸಮಿತಿ ಸದಸ್ಯ ಅಬ್ದುಲ್ಲಾ ಪಾರೆ, ಮಂಗಳೂರು ಶಾಖೆಯ ಅಧ್ಯಕ್ಷ ನೌಫಾಲ್ ಹಸನ್ ಉಪಸ್ಥಿತರಿದ್ದರು.





