ದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಹೊಸ ವಿಭಾಗ!

* ಇನ್ನು ನಮ್ಮೂರಲ್ಲೂ ಬರಬಹುದು ಈ ವಿಶೇಷ ಚಿಕಿತ್ಸೆ
* ಇಂಟರ್ನೆಟ್‌ನಲ್ಲಿ ಮುಳುಗಿರುವವರೇ ಓದಿ
ಹೊಸದಿಲ್ಲಿ, ಅ.26: ದೇಶದ ಅತ್ಯುನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯಾದ ಎಐಐಎಂಎಸ್‌ನಲ್ಲಿ ಸೈಬರ್ ವ್ಯಸನಿಗಳ ಚಿಕಿತ್ಸೆಗಾಗಿ ವಿಶೇಷ ಮನೋವೈದ್ಯಕೀಯ ಹೊರರೋಗಿ ವಿಭಾಗವನ್ನು ಆರಂಭಿಸಲಾಗಿದೆ. ಸಾಮಾಜಿಕ ಜಾಲತಾಣ, ಆನ್‌ಲೈನ್ ಗೇಮ್ಸ್ ಅಥವಾ ಇಂಟರ್‌ನೆಟ್ ವ್ಯಸನದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಈ ವಿಶೇಷ ವಿಭಾಗ ಆರಂಭಿಸಲಾಗಿದೆ.
ಇಂಥ ನೆಟ್ ವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ, ಅದರಲ್ಲೂ ಮುಖ್ಯವಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಈ ಪಿಡುಗಿಗೆ ಬಲಿಯಾಗುತ್ತಿರುವುದರಿಂದ ಸೂಕ್ತ ಚಿಕಿತ್ಸೆ ನೀಡುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ವೈದ್ಯರು ಹೇಳಿದ್ದಾರೆ.
ನಡವಳಿಕೆ ಹಾಗೂ ವ್ಯಸನ ಕ್ಲಿನಿಕ್‌ನ ಮನೋವೈದ್ಯ ಡಾ.ಯತನ್ ಪಾಲ್ ಸಿಂಗ್ ಬಲ್ಹಾರ, ಈ ಚಿಕಿತ್ಸೆಯ ವಿವರ ಹಂಚಿಕೊಂಡರು. ನೆಟ್ ವ್ಯಸನಿಗಳಲ್ಲಿ, ಖಿನ್ನತೆ, ಉದ್ವೇಗ ಹಾಗೂ ಮಾದಕ ವಸ್ತುಗಳ ವ್ಯಸನ ಸಾಮಾನ್ಯ. ಹೊಸ ವಿಭಾಗದಲ್ಲಿ ಅವರಿಗೆ ಅಗತ್ಯವಾದ ಕೌನ್ಸಿಲಿಂಗ್ ನೀಡಲಾಗುತ್ತದೆ. ಅವರ ಇಂಟರ್‌ನೆಟ್ ಬಳಕೆ ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಸದ್ಯಕ್ಕೆ ಈ ಕ್ಲಿನಿಕ್ ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ತೆರೆದಿರುತ್ತದೆ. ಇದಕ್ಕೆ ಪ್ರತಿಕ್ರಿಯೆ ನೋಡಿಕೊಂಡು, ಹೆಚ್ಚಿನ ದಿನಗಳಲ್ಲಿ ತೆರೆಯುವುದು ಅಗತ್ಯವಾಗಿದ್ದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. ಬಲ್ಹಾರ ಹಾಗೂ ಮತ್ತೊಬ್ಬ ಮನೋಚಿಕಿತ್ಸಕರಾದ ಡಾ.ರಚನಾ ಬಾರಧ್ವಾಜ್ ಈ ಕ್ಲಿನಿಕ್‌ನಲ್ಲಿ ಲಭ್ಯರಿರುತ್ತಾರೆ. ಪ್ರತಿ ದಿನ ಆರರಿಂದ ಏಳು ಮಂದಿಯ ತಪಾಸಣೆ ನಡೆಸಲಾಗುತ್ತಿದೆ. ಈ ಬಗ್ಗೆ ಜಾಗೃತಿ ಹೆಚ್ಚಿದಾಗ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.
"ದಿಲ್ಲಿಯ ವಿದ್ಯಾರ್ಥಿಯೊಬ್ಬ 11ನೇ ತರಗತಿವರೆಗೂ ಕ್ಲಾಸ್‌ಗೇ ಫಸ್ಟ್ ಆಗಿದ್ದ. ಆದರೆ ಇಂಟರ್‌ನೆಟ್ ಗೇಮ್ ಆಡಲು ಆರಂಭಿಸಿದ ಬಳಿಕ 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಮೂರು ವರ್ಷದಿಂದ ಆತ ಪ್ರಯತ್ನಿಸುತ್ತಿದ್ದರೂ 12ನೇ ತರಗತಿ ಉತ್ತೀರ್ಣನಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಗೇಮ್ ವ್ಯಸನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.





