ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಗೆ ಸರಕಾರವನ್ನೇ ಎದುರು ಹಾಕಿಕೊಂಡ ಯುವ ಐಎಎಸ್ ಅಧಿಕಾರಿ !

- ಮುಖ್ಯಮಂತ್ರಿ ಹೇಳಿಕೆ ವಿರುದ್ಧವೇ ಫೇಸ್ ಬುಕ್ ಪೋಸ್ಟ್
- ಸರಕಾರದಿಂದ ಅಧಿಕಾರಿ ವಿರುದ್ಧ ಕ್ರಮ
ರಾಂಚಿ, ಅ.26: ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಆದಿವಾಸಿಗಳಿಗಿರುವ ಧಾರ್ಮಿಕ ಸ್ವಾತಂತ್ರ್ಯದ ಕೊರತೆ ವಿಚಾರದಲ್ಲಿ ರಾಜ್ಯ ಸರಕಾರವನ್ನು ಟೀಕಿಸಿದ ಹಿರಿಯ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಸರಕಾರ ಶೋಕಾಸ್ ನೊಟೀಸ್ ಜಾರಿಗೊಳಿಸಿದೆ.
ಮುಖ್ಯಮಂತ್ರಿ ರಘುಬರ್ ದಾಸ್ ದುಮ್ಕಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ ಮತಾಂತರಗೊಳ್ಳುವ ಆದಿವಾಸಿಗಳು ಛೋಟಾ ನಾಗ್ಪುರ್ ಟೆನೆನ್ಸಿ ಆ್ಯಕ್ಟ್ ಮತ್ತು ಸಂತಲ್ ಪರ್ಗನ ಟೆನೆನ್ಸಿ ಆ್ಯಕ್ಟ್ ಇವುಗಳಿಗೆ ತಿದ್ದುಪಡಿ ತರುವ ಸರಕಾರದ ಚಿಂತನೆಯ ವಿರುದ್ಧ ಕಾರ್ಯವೆಸಗುತ್ತಿದ್ದಾರೆಂದು ಹೇಳಿರುವುದು ವಂದನಾ ದಡೇಲ್ ಸರಕಾರವನ್ನು ಟೀಕಿಸಲು ಕಾರಣವಾಗಿದೆ. ಮೇಲಾಗಿ ಮತಾಂತರಗೊಳ್ಳುವ ಆದಿವಾಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಮುಖ್ಯಮಂತ್ರಿ ಹೇಳಿದ್ದಾರೆನ್ನಲಾಗಿದೆ.
ಪಂಚಾಯತಿ ರಾಜ್ ಕಾರ್ಯದರ್ಶಿಯಾಗಿರುವ 1996ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ವಂದನಾ ತಮ್ಮ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ‘‘ಈ ರಾಜ್ಯದ ಆದಿವಾಸಿಗಳಿಗೆ ತಮ್ಮ ಧರ್ಮವನ್ನು ಆಯ್ಕೆ ಮಾಡುವ ಹಕ್ಕಿಲ್ಲವೇ? ಸಮಾಜವು ಹಲವಾರು ಗಂಭೀರ ಸಮಸ್ಯೆಗಳಾದ ಅನಕ್ಷರತೆ, ನಿರುದ್ಯೋಗ ಹಾಗೂ ಅಪೌಷ್ಠಿಕಾಂಶತೆಯಿಂದ ನರಳುತ್ತಿರುವಾಗ ಇತರರೇಕೆ ಒಮ್ಮೆಗೇ ಆದಿವಾಸಿಗಳ ಧರ್ಮದ ಬಗ್ಗೆ ಯೋಚಿಸಲಾರಂಭಿಸಿದ್ದಾರೆ?’’ ಎಂದು ಬರೆದಿದ್ದರು. ಈ ಪೋಸ್ಟನ್ನು ಅವರು ನಂತರ ಡಿಲೀಟ್ ಮಾಡಿದ್ದರು.
ಆದರೆ ವಂದನಾ ತನ್ನ ಈ ಫೇಸ್ ಬುಕ್ ಪೋಸ್ಟ್ ಬಗ್ಗೆ ಕ್ಷಮಾಪಣೆ ಕೋರದೇ ಇರುವುದು ರಾಜ್ಯ ಸರಕಾರಕ್ಕೆ ಸಿಟ್ಟು ತಂದಿದೆಯೆನ್ನಲಾಗಿದೆ.
ಆದರೆ ಸರಕಾರಿ ಅಧಿಕಾರಿಗಳ ಪ್ರಕಾರ ಈ ಹಿಂದೆ ವಿತ್ತ ಹಾಗೂ ಜಾರಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಹಾಗೂ ಕೈಗಾರಿಕಾ ನಿರ್ದೇಶಕಿಯೂ ಆಗಿ ಸೇವೆ ಸಲ್ಲಿಸಿದ್ದ ಆಕೆಗೆ ಈಗಿನ ಹುದ್ದೆ ನಿರಾಸೆ ತಂದಿರಬಹುದು.
ತನ್ನ ಆತ್ಮಕಥನದಲ್ಲಿ ಆಕೆ ತನ್ನ ಅನುಭವಕ್ಕೆ ತನಗೆ ಜಿಲ್ಲಾ ಕಲೆಕ್ಟರ್ ಹುದ್ದೆ ಸಿಗಬೇಕಿತ್ತೆಂದು ಬರೆದಿರುವುದೂ ಇದನ್ನು ಪುಷ್ಠೀಕರಿಸಿದೆ.
ತನಗೆ ನೀಡಲಾಗಿರುವ ಶೋಕಾಸ್ ನೊಟೀಸನ್ನು ಅಧ್ಯಯನ ಮಾಡಿ ನಂತರ ತನ್ನ ಉತ್ತರ ನೀಡಲಿದ್ದೇನೆಂದು ಅವರು ತಿಳಿಸಿದ್ದಾರೆ.







