ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡಿಗೆ ಜಾಟರ ಕರೆ
ಹರ್ಯಾಣದಲ್ಲಿ ಸಮುದಾಯದ ಮೇಲೆ ನಡೆದ ‘ದೌರ್ಜನ್ಯ’ಕ್ಕೆ ಪಾಠ ಕಲಿಸಲು ಹಣ

ಹೊಸದಿಲ್ಲಿ, ಅ.26: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿಂದೀಗಲೇ ತಯಾರಿ ನಡೆಸುತ್ತಿರುವ ನಡುವೆಯೇ ಬಿಜೆಪಿಗೆ ದೊಡ್ಡ ಆಘಾತ ನೀಡುವ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಉತ್ತರ ಪ್ರದೇಶ ಹಾಗೂ ಹರ್ಯಾಣಾದ ಜಾಟರು ಬಿಜೆಪಿಯ ಸೋಲಿಗೆ ಕರೆ ನೀಡಿದ್ದಾರಲ್ಲದೆ ಬಿಜೆಪಿಯ ವಿರುದ್ಧ ಪ್ರಚಾರ ನಡೆಸಲೂ ಆರಂಭಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಹರ್ಯಾಣದಲ್ಲಿ ನಡೆದ ಜಾಟರ ಮೀಸಲಾತಿ ಚಳವಳಿ ಹೋರಾಟಗಾರರ ವಿರುದ್ಧ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರಕಾರ ನಡೆಸಿದ ದೌರ್ಜನ್ಯದ ಬಿಸಿ ಇನ್ನೂ ಆರಿಲ್ಲ. ಈ ಹೋರಾಟದಲ್ಲಿ ಹಲವಾರು ಪ್ರತಿಭಟನಾಕಾರರು ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದರೆ, ಹಲವರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾಗಿವೆ.
ಹರ್ಯಾಣದಲ್ಲಿ ತಮ್ಮ ಸಮುದಾಯದ ಮಂದಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉತ್ತರ ಪ್ರದೇಶದ ಜಾಟರು ಬಿಜೆಪಿ ವಿರುದ್ಧ ಹೋರಾಡಲಿದ್ದಾರೆ. ರಾಜ್ಯದ ಪಶ್ಚಿಮದ 19 ಜಿಲ್ಲೆಗಳಲ್ಲಿ ಜಾಟರ ಜನಸಂಖ್ಯೆ ಸಾಕಷ್ಟಿದ್ದು, ಸುಮಾರು 90 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳ ಮೇಲೆ ಜಾಟರು ಪ್ರಭಾವ ಬೀರಲು ಶಕ್ತರಾಗಲಿದ್ದಾರೆನ್ನಲಾಗಿದೆ
ಹರ್ಯಾಣದ ಜಾಟರ ಹಲವು ಸಂಬಂಧಿಗಳು ಉತ್ತರ ಪ್ರದೇಶದಲ್ಲಿರುವುದರಿಂದ ಸಹಜವಾಗಿ ಹರ್ಯಾಣದಲ್ಲಿ ತಮ್ಮ ಸಮುದಾಯದವರ ವಿರುದ್ಧ ನಡೆದ ದೌರ್ಜನ್ಯ ಅವರಿಗೆ ಸಿಟ್ಟು ಬರಿಸಿದ್ದು ಈಗಾಗಲೇ ‘ನರೇಂದ್ರ ಮೋದಿ ಜಾಟ್ ವಿರೋಧಿ’ ನರೇಂದ್ರ ಮೋದಿ ಕಿಸಾನ್ ವಿರೋಧಿ’ ಮುಂತಾದ ಘೋಷಣೆಗಳು ಚಾಲ್ತಿಯಲ್ಲಿವೆ ಹಾಗೂ ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹರ್ಯಾಣದಲ್ಲಿ ಪೊಲೀಸ್ ಗುಂಡಿಗೆ ಬಲಿಯಾದ ಜಾಟರ ಕುಟುಂಬಗಳು ತಮ್ಮ ಬವಣೆಯನ್ನು ಉತ್ತರ ಪ್ರದೇಶದ ಜಾಟರ ಮುಂದಿಡುತ್ತಿದ್ದು ಅವರಿಗೆ ನೆರವು ಕೂಡ ಹರಿದು ಬರುತ್ತಿದೆ. ಸಭೆಗಳಲ್ಲಿ ಜಾಟ್ ಚಳವಳಿಯಲ್ಲಿ ‘ಹುತಾತ್ಮ’ರಾದವರ ಫೋಟೋಗಳನ್ನೂ ಪ್ರದರ್ಶಿಸಲಾಗುತ್ತಿದೆ.
2014ರ ಚುನಾವಣೆಯ ಸಂದರ್ಭದಲ್ಲಿದ್ದಂತೆ ಈ ಬಾರಿ ಮಾತ್ರ ಜಾಟರು ಬಿಜೆಪಿ ಜತೆಗಿರುವುದಿಲ್ಲ ಎಂದು ಜಾಟ್ ಆರಕ್ಷಣ್ ಮಹಾಸಭಾ ಅಧ್ಯಕ್ಷ ಚೌಧುರಿ ಪುಷ್ಪೇಂದ್ರ ಸಿಂಗ್ ಹೇಳುತ್ತಾರೆ.
ಕೆಲವು ಜಾಟ್ ನಾಯಕರು ಮುಸ್ಲಿಮರು ಹಾಗೂ ದಲಿತರನ್ನೂ ಸಂಪರ್ಕಿಸಿ ಬೆಂಬಲ ಕೋರುತ್ತಿದ್ದಾರೆಂಬ ಬಗ್ಗೆ ಮಾಹಿತಿಯಿದೆ. ಜಾಟರ ಸಹಕಾರವಿಲ್ಲದೆ ಬಿಜೆಪಿಯ ಹಿಂದುತ್ವ ಕಾರ್ಡ್ ಕೆಲಸ ಮಾಡದು ಎಂದೂ ಹೇಳಲಾಗುತ್ತಿದೆ.
ಪಶ್ಚಿಮ ಉತ್ತರ ಪ್ರದೇಶದ ಸುಮಾರು 50 ಅಸೆಂಬ್ಲಿ ಕ್ಷೇತ್ರಗಳಲ್ಲಿ ಜಾಟರ ಜನಂಖ್ಯೆ ಒಟ್ಟು ಜನಸಂಖ್ಯೆಯ ಶೇ.10ರಿಂದ 30ರಷ್ಟಿದೆ. ಅಂತೆಯೇ ಇಲ್ಲಿ ಮುಸ್ಲಿಮರ ಜನಂಖ್ಯೆ ಒಟ್ಟು ಜನಸಂಖ್ಯೆಯ ಶೇ.30ರಷ್ಟಿದೆ.







