ಬೋರ್ಡ್ ರೂಮ್ ನಿಂದ ಕೋರ್ಟ್ ರೂಮ್ ಗೆ ಟಾಟಾ ‘ಮಿಸ್ಟರಿ’

ಮುಂಬೈ, ಅ.26: ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವ ಸಂಸ್ಥೆಯ ಬೋರ್ಡ್ ರೂಮ್ ನಿರ್ಧಾರ ಈಗ ಪೂರ್ಣ ಪ್ರಮಾಣದ ಕೋರ್ಟ್ ರೂಮ್ ಸಮರವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದ್ದು, ಎರಡೂ ಕಡೆಗಳು ಕಾನೂನು ಹೋರಾಟಕ್ಕೆ ಸಜ್ಜಾಗಿವೆ.
ಮಿಸ್ತ್ರಿಯವರನ್ನು ಟಾಟಾ ಸನ್ಸ್ ಅಲ್ಲದೆ ಸಮೂಹದ ಇತರ ಕಂಪೆನಿಗಳಾದ ಟಾಟಾ ಮೋಟಾರ್ಸ್, ಟಿಸಿಎಸ್ ಹಾಗೂ ಟಾಟಾ ಸ್ಟೀಲ್ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಯುವಂತೆ ಹೇಳಿರುವುದು ಟಾಟಾ ಸಮೂಹದಲ್ಲಿ ಮಿಸ್ತ್ರಿಯವರ ಸ್ಥಾನವನ್ನು ಮತ್ತಷ್ಟು ಗೌಣವಾಗಿಸಿದೆ.
ಟಾಟಾ ಸನ್ಸ್ ಈಗಾಗಲೇ ಬಾಂಬೆ ಹೈಕೋರ್ಟಿನಲ್ಲಿ ಕೇವಿಯಟ್ ದಾಖಲಿಸಿ ಮಿಸ್ತ್ರಿ ಕೈಗೊಳ್ಳಬಹುದಾದ ಯಾವುದೇ ಕಾನೂನು ಕ್ರಮವನ್ನು ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಆದರೆ ಸೈರಸ್ ಯಾವುದೇ ಕೇವಿಯಟ್ ದಾಖಲಿಸಿಲ್ಲವೆಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ಮುಂಬರುವ ಕಾನೂನು ಹೋರಾಟಕ್ಕೆ ಎರಡೂ ಕಡೆಗಳು ಸಾಕಷ್ಟು ವಕೀಲರುಗಳನ್ನು ಒಟ್ಟುಗೂಡಿಸಿ ತಯಾರಿ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಟಾಟಾ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಮಿಸ್ತ್ರಿ ಬಾಂಬೆ ಹೈಕೋರ್ಟ್ ಹಾಗೂ ಕಂಪೆನಿ ಲಾ ಬೋರ್ಡ್ ಕದ ತಟ್ಟುವ ಸಾಧ್ಯತೆಯಿದೆ.
ಮಿಸ್ತ್ರಿಯವರನ್ನು ಕೈಬಿಡುತ್ತಿದ್ದಂತೆಯೇ ಜಾಗುವರ್ ಲ್ಯಾಂಡ್ ರೋವರ್ ಸಿಇಒ ರಾಲ್ಫ್ ಸ್ಪೇತ್, ಟಿಸಿಎಸ್ ಸಿಇಒ ಎನ್ ಚಂದ್ರಶೇಖರನ್, ಅವರನ್ನ ಟಾಟಾ ಸನ್ಸ್ ಮಂಡಳಿಗೆ ಸೇರಿಸಲಾಗಿದ್ದು, ಇದು ಅವರ ಕಂಪೆನಿಗಳಲ್ಲಿ ಅವರು ತೋರಿಸಿರುವ ನಾಯಕತ್ವ ಗುಣಗಳಿಗೆ ಅವರಿಗೆ ಸಿಕ್ಕ ಮಾನ್ಯತೆಯಾಗಿದೆ ಎಂದು ಟಾಟಾ ಸನ್ಸ್ ಹಂಗಾಮಿ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.
ಹಲವರ ಪ್ರಕಾರ ಎನ್.ಚಂದ್ರಶೇಖರನ್ ಅವರನ್ನೇ ಟಾಟಾ ಸನ್ಸ್ ಇದರ ಮುಂದಿನ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಟಿಸಿಎಸ್ ಅಭಿವೃದ್ಧಿಯಲ್ಲಿ ಅವರು ವಹಿಸಿರುವ ಪಾತ್ರ ಈಗಾಗಲೇ ಎಲ್ಲರಿಂದಲೂ ಪ್ರಶಂಸೆಗೊಳಗಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.





