ಗಡ್ಡ ಬೆಳೆಸುವುದರ ಕುರಿತು ಸಚಿವ ಜಲೀಲ್, ಲೀಗ್ ನಡುವೆ ವಿಧಾನಸಭೆಯಲ್ಲಿ ವಾಗ್ಯುದ್ಧ

ತಿರುವನಂತಪುರಂ, ಅಕ್ಟೋಬರ್ 26: ಪೊಲೀಸರಿಗೆ ಗಡ್ಡ ಬೆಳೆಸಲು ಅನುಮತಿಸಬೇಕೆಂದು ಕೇರಳ ವಿಧಾನಸಭೆಯಲ್ಲಿ ಸಚಿವ ಕೆ.ಟಿ ಜಲೀಲ್ ಮತ್ತು ಮುಸ್ಲಿಮ್ ಲೀಗ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆಎಂದು ವರದಿಯಾಗಿದೆ.ಪೊಲೀಸ್ ಇಲಾಖೆಯಲ್ಲಿರುವ ಮುಸ್ಲಿಮರಿಗೆ ಗಡ್ಡ ಬೆಳೆಸಲು ಅನುಮತಿ ನೀಡಬೇಕೆಂದು ಚರ್ಚೆಯೊಂದರಲ್ಲಿ ಭಾಗವಹಿಸಿದ ಲೀಗ್ ಸದಸ್ಯ ಟಿವಿ ಇಬ್ರಾಹೀಂ ಸೂಚಿಸಿದ್ದಾರೆ. ಆಗ ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಲೀಲ್ ಗಡ್ಡ ಬೆಳೆಸುವುದು ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ ಎಂದು ಉತ್ತರಿಸಿದ್ದಾರೆ. ಗಡ್ಡ ಬೆಳೆಸುವುದು ಒಂದು ಧಾರ್ಮಿಕ ಹಕ್ಕು ಎಂಬ ರೀತಿಯಲ್ಲಿ ಇಬ್ರಾಹೀಂ ವಿಷಯ ಮುಂದಿಟ್ಟಿದ್ದಾರೆ. ಆದರೆ ಅವರೇ ಗಡ್ಡ ಬೆಳೆಸಿಲ್ಲ. ಇದು ಗಡ್ಡ ಬೆಳೆಸುವುದು ಧಾರ್ಮಿಕ ಬಾಧ್ಯತೆ ಅಲ್ಲವೆಂಬುದನ್ನು ಸೂಚಿಸುತ್ತಿದೆ. ಅದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.
ಆದ್ದರಿಂದಲೇ ಸಿ.ಎಚ್. ಮುಹಮ್ಮದ್ ಕೋಯ ಗೃಹಸಚಿವರಾಗಿದ್ದಾಗಲೂ ಅವರು ಪೊಲೀಸರಲ್ಲಿ ಇಂತಹ ಅವಕಾಶವನ್ನು ಅನುಮತಿಸಿರಲಿಲ್ಲ. ಆದ್ದರಿಂದ ಗಡ್ಡದ ಕುರಿತು ಒಂದು ಸೂಚನೆ ಹೊರಡಿಸದಿರುವುದೇ ಉತ್ತಮವೆಂದು ಜಲೀಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಲೀಗ್ ಸದಸ್ಯರು ಗದ್ದಲ ಆರಂಭಿಸಿದರು. ಜಲೀಲ್‌ರ ಹೇಳಿಕೆ ಅನಗತ್ಯವಾದುದು ಎಂದು ಮಾಜಿ ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಹೇಳಿದ್ದಾರೆ. ಗಡ್ಡ ಧಾರ್ಮಿಕ ವಿಶ್ವಾಸದ ಭಾಗವಾಗಿದೆಎಂದು ವಿಶ್ವಾಸ ಹೊಂದಿರುವ ಬಹುದೊಡ್ಡ ಜನವಿಭಾಗ ನಾಡಲ್ಲಿದೆ. ಗಡ್ಡ ಬೆಳೆಸುವುದು ಬೆಳೆಸದಿರುವುದು ಒಬ್ಬೊಬ್ಬರ ವೈಯಕ್ತಿಕ ಇಚ್ಛೆಗೆ ಸಂಬಂಧಿಸಿದ್ದಾಗಿದೆ ಪ್ರವಾದಿವರ್ಯರ(ಸ) ಚರ್ಯೆ ಎಂಬನೆಲೆಯಲ್ಲಿ ಅವರು ಗಡ್ಡಬೆಳೆಸುವುದಕ್ಕೆ ಬಯಸುವವರಿದ್ದಾರೆ. ಇದನ್ನು ಕೇಳಿಯೂ ನಾವು ಮಾತಾಡಿಲ್ಲ ಎಂದು ನಾಳೆ ಯಾರಾದರೂ ಹೇಳಲು ಆಸ್ಪದವಾಗಬಾರದೆಂದು ನಾನು ಮಾತಾಡುತ್ತಿದ್ದೇನೆ ಎಂದ ಕುಂಞಾಲಿಕುಟ್ಟಿ, ಗಡ್ಡ ಹಲವು ರೀತಿಯಲ್ಲಿ ಇಡುವವರಿದ್ದಾರೆ. ಲೆನಿನ್‌ರ ಗಡ್ಡ ಇಡುವವರಿದ್ದಾರೆ. ಫ್ಯಾಶನ್‌ಗಾಗಿ ಗಡ್ಡ ಬೆಳೆಸುವವರಿದ್ದಾರೆ. ಸ್ಪೀಕರ್ ಕೂಡಾ ಗಡ್ಡ ಬೆಳೆಸಿದ್ದಾರೆ. ಗಡ್ಡ ಬೆಳೆಸದವರೂ ಇದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಹಾಗಿದ್ದರೆ ಗಡ್ಡ ಬೆಳೆಸಿದ್ದಕ್ಕಾಗಿ ತನಗೆ ಆ ಸುನ್ನತ್ ಸಿಗಬಹುದೇ ಎಂದು ಸ್ಪೀಕರ್ ತಮಾಶೆಯಾಗಿ ಪ್ರಶ್ನಿಸಿದರು. ನಂತರ ಗಡ್ಡದ ಕುರಿತು ಚರ್ಚೆ ಮಾಡುವುದು ಬೇಡ ಎಂದು ಸ್ಪೀಕರ್ ಸೂಚಿಸಿದ್ದಾರೆ. ಪುನಃ ಎದ್ದು ನಿಂತು ಜಲೀಲ್ ಸ್ಪಷ್ಟೀಕರಣ ನೀಡತೊಡಗಿದರು. ಅವರು ಗಡ್ಡ ಒಂದು ಕಡ್ಡಾಯ ಕರ್ಮವಲ್ಲ ಎಂದು ತಾನು ಹೇಳಿದ್ದೇನೆ ಎಂದರು. ಒಂದುವೇಳೆ ಗಡ್ಡ ಕಡ್ಡಾಯವಾಗಿದ್ದರೆ ಲೀಗ್‌ನ ಹದಿನೆಂಟು ಶಾಸಕರು ಗಡ್ಡ ಬೆಳೆಸಿಲ್ಲ ಎಂದು ಜಲೀಲ್ ಪ್ರಶ್ನಿಸಿದರು. ಇಂದಿನ ವಾತಾವರಣದಲ್ಲಿ ಪೊಲೀಸರಿಗೆ ಗಡ್ಡ ಬೆಳೆಸಲು ಅನುಮತಿ ನೀಡುವುದನ್ನುಪರಿಗಣಿಸಬೇಕಿಲ್ಲ ಎಂದು ತಾನು ಹೇಳ ಬಯಸಿದ್ದೆ ಎಂದು ಜಲೀಲ್ ಸ್ಪಷ್ಟ ಪಡಿಸಿದರು. ಇಂತಹ ಚರ್ಚೆಗೆ ಅವಕಾಶ ನೀಡಬಾರದು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು. ಇದು ಅನಗತ್ಯವಿವಾದಕ್ಕೆ ಆಸ್ಪದ ಆಗ ಬಹುದುಎಂದು ಅವರು ಎಚ್ಚರಿಸಿದರು ಎಂದು ವರದಿ ತಿಳಿಸಿದೆ.







