ಮೆಸ್ಕಾಂನಿಂದ ಕೋಟ್ಯಂತರ ರೂ. ಅವ್ಯವಹಾರ ಆರೋಪ
ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

ಮಂಗಳೂರು, ಅ.26: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿ ಮೆಸ್ಕಾಂನಿಂದ ಎಸ್‌ಆರ್(ನಿಗದಿತ ದರ)ಗಿಂತ ಅಧಿಕ ದರದಲ್ಲಿ ಪ್ಯಾಕೇಜ್ ಟೆಂಡರ್ ನೀಡುವ ಮೂಲಕ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿಂದು ವ್ಯಕ್ತವಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ತುಂಗಪ್ಪ ಬಂಗೇರ, ಮೆಸ್ಕಾಂನ ಪ್ಯಾಕೇಜ್ ಟೆಂಡರ್‌ಗಳಡಿ ಜಿಲ್ಲೆಯಾದ್ಯಂತ ಸುಮಾರು 12 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರವಾಗಿದೆಯಲ್ಲದೆ, ಈ ಹಗರಣದಲ್ಲಿ ಎಂಡಿಯವರೂ ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದರು. ಈ ಬಗ್ಗೆ ದಾಖಲೆ ಸಂಗ್ರಹಿಸಲು ಮಾಹಿತಿ ಹಕ್ಕಿನಡಿ ಕೋರಿದಾಗ, ನನ್ನ ಗುರುತು ಪತ್ರವನ್ನು ನೀಡುವಂತೆ ನನಗೆ ಸೂಚನೆ ನೀಡಲಾಗಿದೆ. ಸಾಮಾನ್ಯ ಸಭೆಗೆ ಮೆಸ್ಕಾಂ ಎಂಡಿಯವರನ್ನೂ ಕರೆಸುವಂತೆ ಕಳೆದ ಸಭೆಯಲ್ಲಿ ಆಗ್ರಹಿಸಿದ್ದೆ. ಆದರೆ ಅವರು ಬಂದಿಲ್ಲ ತುಂಗಪ್ಪ ಬಂಗೇರ ಆಕ್ಷೇಪಿಸಿದರು.
ಇದೇ ವೇಳೆ ಗ್ರಾಮ ಪಂಚಾಯತ್‌ಗಳಲ್ಲಿ ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತಿಲ್ಲ. ಸಾರ್ವಜನಿಕ ಹಣವನ್ನು ಬಿಲ್‌ಗಾಗಿ ಪಾವತಿ ಮಾಡಲಾಗುತ್ತಿರುವುದರಿಂದ ಮೀಟರ್ ರೀಡಿಂಗ್, ಬಿಲ್ ದರ ಸಾರ್ವಜನಿಕವಾಗಿ ಡಿಸ್‌ಪ್ಲೇ ಆಗುವ ವ್ಯವಸ್ಥೆ ಇರಬೇಕು ಎಂದು ಸದಸ್ಯ ಧರಣೇಂದ್ರ ಕುಮಾರ್ ಆಗ್ರಹಿಸಿದರು. ಈ ಬಗ್ಗೆ ಮೆಸ್ಕಾಂ ಅಧಿಕಾರಿ ಪ್ರತಿಕ್ರಿಯಿಸುತ್ತಾ, ಮೀಟರ್ ರೀಡಿಂಗ್ ಮಾಡಿಯೇ ಬಿಲ್ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್‌ಗಳಿಂದ 2014ರ ಎಪ್ರಿಲ್ 1ರ ಮೊದಲಿನ ವಿದ್ಯುತ್ ಬಿಲ್ ಪಾವತಿ ಆಗದಿರುವುದಕ್ಕೆ ಬಡ್ಡಿ ಬೀಳುತ್ತಿದೆ. ಉಳಿದಂತೆ 2014ರ ಬಳಿಕ ಮೀಟರ್ ರೀಡಿಂಗ್ ಮಾಡಿಯೇ ಬಿಲ್ ನೀಡಲಾಗುತ್ತಿದೆ. ಹಾಗಿದ್ದರೂ ಕೆಲವು ಪಂಚಾಯತ್‌ಗಳಿಂದ ವಿದ್ಯುತ್ ಶುಲ್ಕ ಮೊತ್ತ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂದರು.
95 ಲಕ್ಷ ರೂ. ವಿದ್ಯುತ್ ಬಿಲ್: ಪಿಡಿಒ ಪರಿಶೀಲನೆ ಬಳಿಕ 40 ಲಕ್ಷ ರೂ.ಗಳಿಗೆ ಇಳಿಕೆ!
ಕೆದಿಲ ಗ್ರಾಮ ಪಂಚಾಯತ್‌ಗೆ 95 ಲಕ್ಷ ರೂ. ವಿದ್ಯುತ್ ಬಿಲ್ ಬಂದಿತ್ತು. ಆ ಬಗ್ಗೆ ಅಲ್ಲಿನ ಪಿಡಿಒ ಪರಿಶೀಲಿಸಿದಾಗ ವಿದ್ಯುತ್ ಬಿಲ್‌ನ ಮೊತ್ತ 40 ಲಕ್ಷ ರೂ.ಗಳಿಗೆ ಪರಿಷ್ಕರಣೆಗೊಂಡಿದೆ. ಇಂತಹ ಅವ್ಯವಹಾರಗಳು ಬಹಳಷ್ಟು ಪಂಚಾಯತ್‌ಗಳಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಸದಸ್ಯೆ ಮಂಜುಳಾ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೀಟರ್ ರೀಡಿಂಗ್‌ಗೆ ಹೋಗವಾಗ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಬೇಕು. ಮಾತ್ರವಲ್ಲದೆ, ಕೆದಿಲ ಪ್ರಕರಣಕ್ಕೆ ಸಂಬಂಧಿಸಿ 2 ದಿನಗಳಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಸೂಚನೆ ನೀಡಿದರು.
ಕೊಳವೆ ಬಾವಿ: ಜಿಲ್ಲಾಡಳಿತದ ನಿರ್ದೇಶನ ಪಾಲಿಸಲು ನಿರ್ಣಯ
ಗ್ರಾಮಾಂತರ ಪ್ರದೇಶದಲ್ಲಿ ತುರ್ತು ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೆಗೆಯಲು ಅವಕಾಶವಿದೆಯೇ ಎಂದು ಸದಸ್ಯ ಎಸ್.ಎನ್. ಮನ್ಮಥ ಸಭೆಯಲ್ಲಿ ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಉಮೇಶ್ ಪ್ರತಿಕ್ರಿಯಿಸಿ, ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅಂತರ್ಜಲ ಮಟ್ಟ ಕುಸಿದಿದೆ. 2016-17ನೆ ಸಾಲಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಹೊಸ ಕೊಳವೆಬಾವಿ ಕೊರೆಯವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ನೀಡಿದೆ ಎಂದರು.
ಆದರೆ ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ಕೊಳವೆ ಬಾವಿಯ ಅಗತ್ಯವಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಸದಸ್ಯರಾದ ವಿನೋದ್ ಕುಮಾರ್, ಮಮತಾ ಗಟ್ಟಿ, ಸುಚರಿತ ಶೆಟ್ಟಿ, ಹರೀಶ್ ಕಂಜಿಪಿಲಿ, ಜನಾರ್ದನ ಗೌಡ, ಧನಲಕ್ಷ್ಮಿ, ತುಂಗಪ್ಪ ಬಂಗೇರ, ಶಯನಾ ಮೊದಲಾದವರು ಆಗ್ರಹಿಸಿದರು.
ಈ ಬಗ್ಗೆ ಕೆಲಹೊತ್ತು ಚರ್ಚೆಯ ಬಳಿಕ ಜಿಲ್ಲೆಯಲ್ಲಿ ಈಗಾಗಲೇ ಸರಕಾರದ ಕುಡಿಯುವ ನೀರಿನ ಮೂಲಗಳ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಕೊಳವೆ ಬಾವಿ ಕೊರೆಯವುದನ್ನು ನಿಷೇಧಿಸಿದೆ. ಅದೇ ಆದೇಶವನ್ನು ಪಾಲಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.
ಹಿಂದಿನ ಸಭೆಯ ನಿರ್ಣಯಕ್ಕೆ ತಿದ್ದುಪಡಿ ಆರೋಪ: ವಿಪಕ್ಷದ ಪ್ರತಿಭಟನೆ
ಕಳೆದ ಆಗಸ್ಟ್‌ನಲ್ಲಿ ನಡೆದ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಮಾಡಲಾದ ನಿರ್ಣಯವನ್ನು ಅಧ್ಯಕ್ಷರು ತಿದ್ದುಪಡಿ ಮಾಡಿ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ಇಂದು ಸಭೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ಸದಸ್ಯರು (ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಸೇರಿದಂತೆ) ಅಧ್ಯಕ್ಷ ಪೀಠದೆದುರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಮಾರುಕಟ್ಟೆ ಮೂಲಭೂತ ಸೌಕರ್ಯ ಯೋಜನೆಯಡಿಯಲ್ಲಿ 10 ಲಕ್ಷ ರೂ. ನಿಗದಿಯಾಗಿದ್ದು, ಪುತ್ತೂರಿನ ನೆಲ್ಯಾಡಿ ಹಾಗೂ ಬಂಟವಾಳದ ಕಕ್ಕೆಪದವು ಎಪಿಎಂಸಿ ಅಭಿವೃದ್ದಿಗೆ ತಲಾ 5 ಲಕ್ಷ ರೂ. ಅನುದಾನವನ್ನು ಹಂಚಿಕೆ ಮಾಡಿ ಕಳೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಇದೀಗ ಅದನ್ನು ಅಧ್ಯಕ್ಷರು ತಿದ್ದುಪಡಿ ಮಾಡುವ ಮೂಲಕ ಸಭೆಯ ನಿರ್ಣಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಎಂ.ಎಸ್. ಮುಹಮ್ಮದ್ ಆಕ್ಷೇಪಿಸಿದರು.
ಇದೀಗ ಪುತ್ತೂರು ತಾಲೂಕು ನೆಲ್ಯಾಡಿ ಎಪಿಎಂಸಿ ಅಭಿವೃದ್ಧಿಗೆ 3 ಲಕ್ಷ ರೂ., ಬಂಟ್ವಾಳ ತಾಲೂಕಿನ ಕಕ್ಕೆಪದವು ಎಪಿಎಂಸಿ ಅಭಿವೃದ್ಧಿಗೆ 3 ಲಕ್ಷ ರೂ. ಹಾಗೂ ಸಿದ್ಧಕಟ್ಟೆ ಮತ್ತು ಪುತ್ತೂರು ಎಪಿಎಂಸಿ ಅಭಿವೃದ್ಧಿಗೆ ತಲಾ 2 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಹಿಂದಿನ ಸಾಲಿನಲ್ಲಿ ಪುತ್ತೂರು ಎಪಿಎಂಸಿಗೆ 10 ಲಕ್ಷ ರೂ. ಅನುದಾನ ನೀಡಲಾಗಿತ್ತು. ಆದರೆ ಅದನ್ನು ಬಳಕೆ ಮಾಡದ ಹಿನ್ನೆಲೆಯಲ್ಲಿ ಅದು ಸರಕಾರಕ್ಕೆ ಹಿಂದೆ ಹೋಗಿತ್ತು. ಈಗ ಮತ್ತೆ ಅಧ್ಯಕ್ಷರು ಹಿಂದಿನ ಸಭೆಯಲ್ಲಿ ಆಗಿರುವ ನಿರ್ಣಯವನ್ನು ಕಡೆಗಣಿಸಿ ಮತ್ತೆ ಪುತ್ತೂರು ಎಪಿಎಂಸಿಗೆ 2 ಲಕ್ಷ ರೂ. ನೀಡುವ ಮೂಲಕ ಅನ್ಯಾಯವೆಸಗಿದ್ದಾರೆ ಎಂದು ಮಮತಾ ಗಟ್ಟಿ, ಮಂಜುಳಾ ಮಾಧವ, ಅನಿತಾ ಹೇಮನಾಥ, ಧರಣೇಂದ್ರ ಕುಮಾರ್ ಸೇರಿದಂತೆ ವಿಪಕ್ಷ ಸದಸ್ಯರು ಆಕ್ಷೇಪಿಸುತ್ತಾ, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಅಧ್ಯಕ್ಷರ ಪೀಠದೆದುರು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆಗೆ ವೇದಿಕೆಯ ಮೇಲಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಸದಸ್ಯ ಶಾಹುಲ್ ಹಮೀದ್ ಕೂಡಾ ಕೆಳಗಿಳಿದು ಜತೆಗೂಡಿದರು.
ಈ ಸಂದರ್ಭ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ವಿಪಕ್ಷದ ಸದಸ್ಯರ ಮನವೊಲಿಕೆಗೆ ಪ್ರಯತ್ನಿಸಿದರೂ ಈ ಬಗ್ಗೆ, ಪ್ರತಿಭಟನೆ ನಿರತ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ನಮಗೆ ನ್ಯಾಯ ಬೇಕುಎಂದು ಹೇಳುತ್ತಾ ವಿಪಕ್ಷ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸುಮಾರು ಮುಕ್ಕಾಲು ಗಂಟೆ ಕಾಲ ವಾದ- ವಾಗ್ವಾದಗಳ ಬಳಿಕ ಅಧ್ಯಕ್ಷರು ಪ್ರತಿಭಟನಾ ನಿರತ ಸದಸ್ಯರ ಮನವೊಲಿಸಲು ವಿಫಲರಾಗಿ ಸಭೆಯನ್ನು ಮುಂದೂಡಿದರು.
ಸುಮಾರು 45 ನಿಮಿಷಗಳ ಕಾಲ ಸಭೆ ಮುಂದೂಡಲ್ಪಟ್ಟು, ಸದಸ್ಯರ ಜತೆ ಸಭಾಂಗಣದ ಹೊರಗಿನ ಕೊಠಡಿಯಲ್ಲಿ ಚರ್ಚೆ ನಡೆಯಿತು. ಬಳಿಕ, ಸಭೆ ಆರಂಭಿಸಿದ ಅಧ್ಯಕ್ಷರು, ಕಳೆದ ಸಾಮಾನ್ಯ ಸಭೆಯಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸುವುದಾಗಿ ಹೇಳಿ ವಿವಾದಕ್ಕೆ ನಾಂದಿ ಹಾಡಿದರು. ವಿಪಕ್ಷದವರು ತಮ್ಮ ಸ್ಥಾನಗಳಿಗೆ ತೆರಳಿದ ಬಳಿಕ ಸಭೆ ಮುಂದುವರಿಯಿತು.







