ಬಿಹಾರ : ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅನಾಗರೀಕವಾಗಿ ಹಿಂಸಿಸಿ, ಬರ್ಬರ ಕೊಲೆ

ಬಿಹಾರ, ಅ.26: ಮೂವರು ಬೈಕ್ ಸವಾರರು ಬಾಲಕಿಯ ಚೂಡಿದಾರದ ಶಾಲ್ ಹಿಡಿದೆಳೆದಾಗ ರಸ್ತೆಗೆ ಬಿದ್ದ ಆಕೆಯನ್ನು ಸುಮಾರು 50 ಮೀಟರ್‌ನಷ್ಟು ದೂರ ಎಳೆದೊಯ್ದು ಆ ಬಳಿಕ ಆಕೆಯ ಮೇಲೆ ಬೈಕ್ ಚಲಾಯಿಸಿ ಹತ್ಯೆ ಮಾಡಿದ ಭೀಕರ ಘಟನೆ ಬಿಹಾರದ ಕೈಮೂರ್ ಜಿಲ್ಲೆಯ ಕರ್ಜಾನ್ ಗ್ರಾಮದ ಬಳಿ ನಡೆದಿದೆ. ಹದಿನೈದರ ಹರೆಯದ ಆ ಬಾಲಕಿ ತನ್ನ ಮೂವರು ಸಹಪಾಠಿಗಳೊಂದಿಗೆ ಎಸ್ಸೆಸ್ಸೆಲ್ಸಿ ಅರ್ಧವಾರ್ಷಿಕ ಪರೀಕ್ಷೆ ಬರೆಯಲು ಹೋಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಯುವಕರ ಪೈಕಿ ಓರ್ವ ಬಾಲಕಿಯ ಚೂಡಿದಾರದ ಶಾಲ್ ಹಿಡಿದು ಎಳೆದಿದ್ದಾನೆ. ಶಾಲು ಕುತ್ತಿಗೆಗೆ ಬಿಗಿದು ಬಾಲಕಿ ರಸ್ತೆಗೆ ಬಿದ್ದಿದ್ದಾಳೆ. ಈಕೆಯನ್ನು ರಸ್ತೆ ಮೇಲೆ ಎಳೆದುಕೊಂಡೇ ಸುಮಾರು 50 ಮೀಟರ್‌ನಷ್ಟು ದೂರ ಸಾಗಿದ್ದಾರೆ. ಬಳಿಕ ಬೈಕ್ ತಿರುಗಿಸಿದ ದುಷ್ಕರ್ಮಿಗಳು ಬಾಲಕಿಯ ದೇಹದ ಮೇಲೆಯೇ ಬೈಕ್ ಚಲಾಯಿಸಿ ಆಕೆಯನ್ನು ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಬಾಲಕಿಯರ ಬೊಬ್ಬೆ ಕೇಳಿ ಜನ ಒಟ್ಟು ಸೇರಿದಾಗ ಬೈಕ್ ಸವಾರರು ಪರಾರಿಯಾಗಿದ್ದಾರೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಚರಂಡಿಗೆ ಉರುಳಿದ್ದು ಬೈಕ್ ಸವಾರರು ಓಡಿಹೋಗಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಜನ , ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಬೈಕ್‌ಗೆ ಬೆಂಕಿಯಿಡಲು ಮುಂದಾದಾಗ ಪೊಲೀಸರು ತಡೆದರು. ಬೃಜೇಶ್ ಗುಪ್ತಾ ಎಂಬಾತನ ಹೆಸರಿನಲ್ಲಿ ಬೈಕ್ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಬಾಲಕಿಯ ತಂದೆ ಸ್ಥಳೀಯ ಕೃಷ್ಣಕುಮಾರ್ ಗೊಂಡ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ದೂರು ನೀಡಿದ್ದು ಆರೋಪಿಗಳು ತಲೆ ತಪ್ಪಿಸಿಕೊಂಡಿದ್ದು ಇವರ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







