ಕೇವಲ 15 ನಿಮಿಷದಲ್ಲಿ ಅಬುಧಾಬಿಯಿಂದ ದುಬೈಗೆ !

ದುಬೈ, ಅ. 26: ಅಬುಧಾಬಿ ಮತ್ತು ದುಬೈ ನಡುವೆ ನಿಯಮಿತವಾಗಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ. ಇನ್ನು ಅವರು 15 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ಈ ಎರಡು ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾಪಿತ ಸಾರಿಗೆ ವ್ಯವಸ್ಥೆಯ ವಿನ್ಯಾಸವನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ.
ಸೋಮವಾರ ಬಾರ್ಕೆ ಇಂಜೆಲ್ಸ್ ಗ್ರೂಪ್ (ಬಿಐಜಿ) ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಯೋಜನೆಯ ವಿನ್ಯಾಸಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಹಂಚಿಕೊಂಡಿದೆ. ಯೋಜನೆಯ ಅಧಿಕೃತ ಉದ್ಘಾಟನೆಯು ದುಬೈಯಲ್ಲಿ ನವೆಂಬರ್ 7ರಂದು ನಡೆಯಲಿದೆ.
‘ಹೈಪರ್‌ಲೂಪ್ ವನ್’ ಎಂಬ ಹೆಸರಿನ ಹೈ-ಸ್ಪೀಡ್ ವ್ಯವಸ್ಥೆಯು ಯುಎಇ ರಾಜಧಾನಿ (ಅಬುಧಾಬಿ)ಯನ್ನು ದುಬೈಯೊಂದಿಗೆ ಸಂಪರ್ಕಿಸುತ್ತದೆ ಹಾಗೂ ಈ ಎರಡು ನಗರಗಳ ನಡುವಿನ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ.
‘‘ಕೆಲವೇ ವರ್ಷಗಳಲ್ಲಿ ನೂತನ ಸಂಚಾರ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿ ಜಗತ್ತನ್ನೇ ಬದಲಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ’’ ಎಂದು ಬಿಐಜಿ ಪಾಲುದಾರ ಜಾಕೋಬ್ ಲ್ಯಾಂಜ್ ಹೇಳಿದರು.
ನೂತನ ಕ್ರಾಂತಿಕಾರಕ ಸಾರಿಗೆ ವ್ಯವಸ್ಥೆಯು ಜನರ ಪ್ರಯಾಣ ವಿಧಾನವನ್ನೇ ಬದಲಿಸಲಿದೆ. ಯುಎಇಯ ಪ್ರಯಾಣಿಕರು ಸೆಮಿ-ವ್ಯಾಕ್ಯೂಮ್ಡ್ ಟ್ಯೂಬ್‌ಗಳಲ್ಲಿ ಈ ಎರಡು ನಗರಗಳ ನಡುವಿನ 150 ಕಿಲೋಮೀಟರ್ ದೂರವನ್ನು ನಿಮಿಷಗಳಲ್ಲಿ ಕ್ರಮಿಸಬಹುದು.
ಇಂಗ್ಲಿಷ್‌ನ ‘ವೈ’ ಆಕಾರದ ಟಿಲ್ಟ್‌ಗಳಲ್ಲಿರುವ ಟ್ಯೂಬ್‌ಗಳ ಜಾಲವನ್ನು ಹಾಗೂ ಅದರೊಳಗೆ ಹಾದು ಹೋಗುವ ವಾಹನದ ಭಾಗಗಳನ್ನು ವೀಡಿಯೊ ತೋರಿಸುತ್ತದೆ.
ಹೈಪರ್‌ಲೂಪ್‌ನ ಭವಿಷ್ಯದ ಮಾರ್ಗವನ್ನು ತೋರಿಸುವ ವೀಡಿಯೊವನ್ನೂ ನೋಡಬಹುದಾಗಿದೆ. ಮಾರ್ಗವು ಯುಎಇ ರಾಜಧಾನಿಯಿಂದ ಅಬುಧಾಬಿ ವಿಮಾನ ನಿಲ್ದಾಣ, ಅಲ್ ಮಕ್ತೂಮ್ ವಿಮಾನ ನಿಲ್ದಾಣ ಮತ್ತು ದುಬೈ ವಿಮಾನ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಖಲೀಫ ಬಂದರು ಮತ್ತು ಜೆಬೆಲ್ ಅಲಿ ಬಂದರುಗಳ ನಡುವೆಯೂ ಸಂಪರ್ಕ ಕಲ್ಪಿಸಲಾಗಿದೆ.







