ರಾಜ್ಯದಲ್ಲಿನ ಬರ-ನೆರೆ: 14,630 ಕೋಟಿ ರೂ.ನಷ್ಟ
3,760 ಕೋಟಿ ರೂ.ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

ಬೆಂಗಳೂರು, ಅ. 26: ಮಳೆ ವೈಫಲ್ಯದಿಂದ ರಾಜ್ಯದಲ್ಲಿನ ಬರ ಮತ್ತು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾದ ಪ್ರವಾಹದಿಂದಾಗಿ ಒಟ್ಟು 14,630 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. 3,760 ಕೋಟಿ ರೂ.ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ ವಿಧಾನಸೌಧದಲ್ಲಿನ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಅನಾವೃಷ್ಟಿ ಮತ್ತು ಅತಿವೃಷ್ಟಿ ಸಂಬಂಧ ಕೃಷಿ ಮತ್ತು ಕಂದಾಯ ಸಚಿವರ ನೇತೃತ್ವದ ನಿಯೋಗ ಇನ್ನು ಎರಡು ದಿನಗಳೊಳಗೆ ಹೊಸದಿಲ್ಲಿಗೆ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎಂದರು.
ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಈಗಾಗಲೇ 110ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಬರ ಪೀಡಿತ ತಾಲೂಕುಗಳಲ್ಲಿ ಅಧ್ಯಯನ ನಡೆಸಿದ್ದು 12,145.79 ಕೋಟಿ ರೂ.ಬೆಳೆ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಯನ್ವಯ 3,373.85 ಕೋಟಿ ರೂ.ಪರಿಹಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿದ್ದ ಭಾರಿ ಮಳೆಯಿಂದಾಗಿ 2,485.06 ಕೋಟಿ ರೂ ಬೆಳೆ ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದ್ದು, ಕೇಂದ್ರದ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಅನ್ವಯ 386.44 ಕೋಟಿ ರೂ ಪರಿಹಾರ ಕೋರಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದರು.
ಗೋಶಾಲೆ ಆರಂಭಕ್ಕೆ ಕ್ರಮ: ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು, ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಲು ಸೂಚನೆ ನೀಡಿದ್ದು, ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಈಗಾಗಲೇ ಕಂದಾಯ ಇಲಾಖೆ 201 ಕೋಟಿ ರೂ. ವೆಚ್ಚ ಮಾಡಿದ್ದು, ಘಟನೋತ್ತರ ಮಂಜೂರಾತಿಗೆ ಸಂಪುಟ ಸಮ್ಮತಿಸಿದೆ ಎಂದರು.
ಕೃಷಿ ಭೂಮಿ ಖರೀದಿಗೆ ಒಪ್ಪಿಗೆ: ರಾಜ್ಯದ ಭೂ ಸುಧಾರಣಾ ಕಾಯಿದೆ ಅನ್ವಯ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ರೈತರಿಂದ ನೇರವಾಗಿ ಖರೀದಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಶಿಫಾರಸ್ಸು ಮಾಡುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆ-1961 ರ 109(ಎ), 79 (ಎ) ಮತ್ತು (ಬಿ), 63 ಹಾಗೂ 80ರ ಅನ್ವಯ ಕೆಲವು ವಿನಾಯಿತಿ ನೀಡಲು ಸಂಪುಟ ತೀರ್ಮಾನಿಸಿದೆ. ಈ ಕಾಯಿದೆಯನ್ವಯ ಸಿಮೆಂಟ್, ಉಕ್ಕು ಹಾಗೂ ವಿದ್ಯುತ್ ಕಾರ್ಖಾನೆಗಳ ಸ್ಥಾಪನೆಗೆ ಜಮೀನು ಮಂಜೂರು ಮಾಡಲು ಸಂಪುಟವು ತನ್ನ ಒಪ್ಪಿಗೆ ನೀಡಿದೆ.
ಕಲಬುರಗಿ ಜಿಲ್ಲೆಯ ಸರಡಗಿ ಬಳಿ 179 ಎಕರೆ ಕೃಷಿ ಭೂಮಿಯನ್ನು ‘ಶ್ರೀ ಸಿಮೆಂಟ್’ ಕಾರ್ಖಾನೆ, ಕನಕಪುರ ತಾಲೂಕಿನ ಕೆಳರಾಡು ಗ್ರಾಮ ಬಳಿ ಮೂಕಾಂಬಿಕಾ ಇನ್ವೆಸ್ಟರ್ ಪ್ರೈವೇಟ್ ಲಿ.ನ ಆರೋಗ್ಯ ಧಾಮಕ್ಕೆ 40.2 ಎಕರೆ, ಸೇಡಂ ತಾಲೂಕಿನ ಅರೆ ಬೊಮ್ಮನಹಳ್ಳಿ ಬಳಿ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಗೆ 262.13ಎಕರೆ, ಕೊಪ್ಪಳ ತಾಲೂಕಿನ ಗುಡಗೇರಿ ಹೊರೆಬಾಗನಾಡ ಬಳಿ 673.13 ಎಕರೆ ಪ್ರದೇಶದಲ್ಲಿ ಉಕ್ಕು ಮತ್ತು ವಿದ್ಯುಚ್ಛಕ್ತಿ ಉತ್ಪಾದನೆ ಘಟಕ ಸ್ಥಾಪನೆಗೆ ಮೆ: ಆಕ್ಸ್ ಸ್ಟೀಲ್ ಕಂಪೆನಿಗೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬೀದರ್ ಜಿಲ್ಲೆಯ ಹೊನಕೇರಿ ಬಳಿ 70.18 ಎಕರೆ ಭೂಮಿಯನ್ನು ಗುರುಪಾದಪ್ಪ ನಾಗಮಾರಪಲ್ಲಿ ಪ್ರತಿಷ್ಠಾನಕ್ಕೆ ಮಂಜೂರು ಒಪ್ಪಿಗೆ ನೀಡಿದೆ ಎಂದು ವಿವರ ನೀಡಿದರು.
ಕಲಬುರಗಿಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತಿಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು 51.53ಕೋಟಿ ರೂ.ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ವಿವರಿಸಿದರು.
ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆ ನಿಷೇಧದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯ ಅಧಿಕಾರಿಗಳನ್ನು ಅನುಷ್ಠಾನ ಅಧಿಕಾರಿಗಳು ಎಂದು ಸೇರ್ಪಡೆ ಮಾಡಿ ಸರಕಾರದ ಅಧಿಸೂಚನೆ ಹೊರಡಿಸಲು ಸಂಪುಟವು ಒಪ್ಪಿಗೆ ನೀಡಿದೆ ಎಂದರು.
ಕೇಂದ್ರದ ಅಧಿಸೂಚನೆಯಂತೆ ರಾಜ್ಯದ ಹಲವು ನಗರಗಳ ಹೆಸರುಗಳನ್ನು ಬದಲಾಯಿಸಿದ್ದು, ನ್ಯಾಯಾಲಯಗಳಲ್ಲಿನ ಪ್ರಕರಣಗಳಲ್ಲಿ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಲು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ರಾಜ್ಯದ ಈ ನಗರಗಳ ಹೆಸರುಗಳನ್ನು ಬದಲಾಯಿಸುವ ವಿಧೇಯಕ ಮಂಡಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಸಬಾ ಹೋಬಳಿ ಕಲ್ಲುಕೋಟೆ ಗ್ರಾಮದಲ್ಲಿ 12.21ಎಕರೆ ಸರಕಾರಿ ಜಮೀನಿನಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ನಡೆಸುತ್ತಿರುವ 15 ಖಾಸಗಿ ಸಂಘ-ಸಂಸ್ಥೆಗಳ ಗುತ್ತಿಗೆ-ಆಧಾರಿತ ಜಮೀನನ್ನು ಅನುದಾನ-ಆಧಾರಿತ ಜಮೀನು ಎಂದು ಪರಿಗಣಿಸಲು ಸಚಿವ ಸಂಪುಟವು ಮಂಜೂರಾತಿ ನೀಡಿದೆ.
ಅದೇ ರೀತಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿ ಅಣೂರು ಗ್ರಾಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ 2.2 ಎಕರೆ ಜಮೀನು ಮಂಜೂರು ಮಾಡಲು ಸಂಪುಟವು ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಹೇಳಿದರು. ಮೈಸೂರಿನಲ್ಲಿ ಡಿ.29ರಿಂದ 2017ರ ಜ.4 ರ ವರೆಗೆ ಆಯೋಜಿಸಿರುವ 17ನೆ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಗೆ 10ಕೋಟಿ ರೂ.ಒಂದು ಬಾರಿಯ ಸಹಾಯ ಅನುದಾನವನ್ನು ನೀಡಲು ಅನುಮೋದನೆ ನೀಡಿದೆ. ಏಳು-ದಿನಗಳ ಈ ಜಾಂಬೂರಿಯನ್ನು ಡಿ.29ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಲಿದ್ದಾರೆ ಎಂದು ಜಯಚಂದ್ರ ತಿಳಿಸಿದರು.
ಅಂಗವಿಕಲ ವ್ಯಕ್ತಿಗಳಿಗೆ ರಾಜ್ಯ ನಾಗರಿಕ ಸೇವೆಗಳಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುವ ಕುರಿತಂತೆ ರಾಷ್ಟ್ರೀಯ ಅಂಧರ ಒಕ್ಕೂಟ ಸಂಸ್ಥೆ ಬೇಡಿಕೆಗಳನ್ನು ಪರಿಗಣಿಸಿ ಸಂಪುಟದ ಉಪ ಸಮಿತಿ ನೀಡಿರುವ ಶಿಫಾರಸ್ಸುಗಳಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಇನ್ನು ಮುಂದೆ ಅಂಗವಿಕಲರು ಎಂಬ ನಾಮಾಂಕಿತ ವ್ಯಕ್ತಿಗಳಿಗೆ ಮೀಸಲಿರಿಸಿರುವ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಲು ಅವಕಾಶವಿರುವುದಿಲ್ಲ. ಅಲ್ಲದೆ, ನೇಮಕಾತಿಯ ಸಂದರ್ಭದಲ್ಲಿ ಕೇಂದ್ರದ ಮಾರ್ಗಸೂಚಿಗಳಂತೆ ನೇಮಕಾತಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಸಂಪುಟವು ಸಮ್ಮತಿಸಿದೆ.
ಚಾಮರಾಜ ನಗರದ ಹರವೆ ಗ್ರಾಮದಲ್ಲಿ 13.91ಕೋಟಿ ರೂ.ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಅವರು ವಿವರ ನೀಡಿದರು.







