ಪಾಕ್ ಸರ್ವನಾಶಗೊಳಿಸಲು ಭಾರತದಿಂದ ಪ್ರಯತ್ನ : ಇಮ್ರಾನ್ ಖಾನ್ ಆರೋಪ

ಇಸ್ಲಾಮಾಬಾದ್, ಅ. 26: ಪಾಕಿಸ್ತಾನವನ್ನು ‘ಸರ್ವನಾಶಗೊಳಿಸಲು’ ಹಾಗೂ ಭ್ರಷ್ಟಾಚಾರದ ವಿರುದ್ಧದ ಕ್ರಮಗಳನ್ನು ಬುಡಮೇಲುಗೊಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಇಂದು ಆರೋಪಿಸಿದ್ದಾರೆ.
ಅದೇ ವೇಳೆ, ಪ್ರಧಾನಿ ನವಾಝ್ ಶರೀಫ್ ದೇಶದ ‘ಭದ್ರತಾ ಅಪಾಯ’ ಎಂಬುದಾಗಿಯೂ ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್ ಹೇಳಿದರು.
‘‘ಪಾಕಿಸ್ತಾನವನ್ನು ಆಂತರಿಕವಾಗಿ ಸರ್ವನಾಶಗೊಳಿಸುವ ಉದ್ದೇಶದ ನೂತನ ಸಿದ್ಧಾಂತವೊಂದು ಭಾರತದಲ್ಲಿ ಹುಟ್ಟಿಕೊಂಡಿದೆ. ಯಾಕೆಂದರೆ, ನಮ್ಮನ್ನು ಸೈನಿಕ ಶಕ್ತಿಯಿಂದ ಸೋಲಿಸುವಲ್ಲಿ ಅವರು ವಿಫಲರಾಗಿದ್ದಾರೆ’’ ಎಂದು ಕ್ವೆಟ್ಟಾಕ್ಕೆ ಹೋಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ನುಡಿದರು.
ಕ್ವೆಟ್ಟಾದ ಪೊಲೀಸ್ ತರಬೇತಿ ಕಾಲೇಜೊಂದರ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದರುವ ಭಯೋತ್ಪಾದಕರು 61 ಪೊಲೀಸ್ ಕೆಡೆಟ್‌ಗಳನ್ನು ಹತ್ಯೆ ಮಾಡಿದ್ದಾರೆ.
‘‘ಪಾಕಿಸ್ತಾನವು ಯಾವುದೇ ಸುಧಾರಣೆಗಳಿಲ್ಲದೆ ಅರಾಜಕತೆಯತ್ತ ವಾಲುವಂತೆ ಮಾಡುವುದು ಅದರ ಉದ್ದೇಶ’’ ಎಂದು ಹೇಳಿದ ಅವರು, ಪಾಕಿಸ್ತಾನದಲ್ಲಿ ಆಂತರಿಕ ರಾಜಕೀಯ ಸುಧಾರಣಾ ಚಳವಳಿ ಯಶಸ್ವಿಯಾಗುವುದನ್ನು ಭಾರತ ಬಯಸುವುದಿಲ್ಲ ಎಂದರು.
‘‘ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಲು ನಾವು ಸಿದ್ಧರಾದಾಗಲೆಲ್ಲ, ಇಂಥ ಭಯೋತ್ಪಾದಕ ದಾಳಿಗಳು ನಡೆಯುತ್ತವೆ’’ ಎಂದು ಇಮ್ರಾನ್ ಖಾನ್ ಹೇಳಿದರು.







