ಉದ್ಯಮಿ ಬಿ.ಆರ್.ಶೆಟ್ಟಿ ಸುಪರ್ದಿಗೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಅ. 30ಕ್ಕೆ ನೂತನ ಆಸ್ಪತ್ರೆಗೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ: ಪ್ರಮೋದ್

ಉಡುಪಿ, ಅ.26: 1930ರ ಆಸುಪಾಸಿನಲ್ಲಿ ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಸಾಹೇಬ್‌ರು ಬಡಜನರ ಬಳಕೆಗಾಗಿ ತನ್ನದೇ ಜಾಗದಲ್ಲಿ ತನ್ನ ತಂದೆಯ ಹೆಸರಿನಲ್ಲಿ ನಿರ್ಮಿಸಿ ಕೊಟ್ಟ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ಕೊನೆಗೂ ಅನಿವಾಸಿ ಭಾರತೀಯ ಉದ್ಯಮಿ ಉಡುಪಿ ಮೂಲದ ಬಿ.ಆರ್.ಶೆಟ್ಟಿ ಅವರ ಸುಪರ್ದಿಗೆ ಒಪ್ಪಿಸಿಬಿಟ್ಟಿದೆ.
ಉಪ್ಪೂರು ಗ್ರಾಪಂ ವ್ಯಾಪ್ತಿಯ ಕೊಳಲಗಿರಿ ಅಮ್ಮುಂಜೆಯಲ್ಲಿರುವ ತನ್ನ ನಿವಾಸದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಮೀನುಗಾರಿಕಾ, ಯುವ ಜನಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಈ ವಿಷಯವನ್ನು ತಿಳಿಸಿದರು.
ಉಡುಪಿಯ ಕೇಂದ್ರ ಸ್ಥಾನವಾದ ಕವಿ ಮುದ್ದಣ ರಸ್ತೆಯಲ್ಲಿರುವ ನಗರಸಭಾ ಕಟ್ಟಡ ಬಳಿಯಲ್ಲಿಯೇ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಸಾವಿರಾರು ಬಡವರ ಸಂಜೀವಿನಿಯಾಗಿರುವ ಹಾಜಿ ಅಬ್ದುಲ್ಲ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 3.88 ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿ.ಗೆ 30ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ಆಧಾರದಲ್ಲಿ (ಲೀಸ್) ನೀಡಲು ಹಾಗೂ ಅಗತ್ಯವಿದ್ದಲ್ಲಿ ಇನ್ನೂ 30 ವರ್ಷಗಳ ಅವಧಿಗೆ ಲೀಸ್‌ನ್ನು ಮುಂದುವರಿಸಲು ರಾಜ್ಯ ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ ಎಂದವರು ಹೇಳಿದರು.
ಇದರಲ್ಲಿ ಈಗಿನ 70 ಹಾಸಿಗೆಗಳ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗಳ ಬದಲಿಗೆ ಈಗ ನಗರಸಭೆಯ ಎದುರಿನ ಮಹಾತ್ಮಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಯ ಹಿಂಭಾಗದ ಜಾಗದಲ್ಲಿ 200ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ನಿರ್ಮಿಸಿ ಕೊಡಲಿದ್ದಾರೆ. ಈ ಆಸ್ಪತ್ರೆಗೆ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಎಂದು ನಾಮಕರಣ ಮಾಡಲು ಹಾಗೂ ಈಗಿನಂತೆ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎಂದವರು ಹೇಳಿದರು.
ಒಂದು ವರ್ಷದ ಅವಧಿಯೊಳಗೆ ಈ ಆಸ್ಪತ್ರೆಯನ್ನು ನಿರ್ಮಿಸಿ ಬಡವರಿಗಾಗಿ ಉಚಿತವಾಗಿ ನೀಡಿದ ಬಳಿಕ ಈಗಿರುವ ಮಹಿಳಾ-ಮಕ್ಕಳ ಆಸ್ಪತ್ರೆಯನ್ನು ಕೆಡವಿ ಅಲ್ಲಿ 400 ಹಾಸಿಗೆಗಳ ಸಾಮರ್ಥ್ಯದ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆ (ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಹಾಗೂ ಸಮುದಾಯ ಆರೋಗ್ಯ ಸೌಲಭ್ಯಗಳನ್ನು (ಅಲಂಕಾರ್ ಥಿಯೇಟರ್ ಬಲಭಾಗದ ಜಾಗದಲ್ಲಿ) ಒಳಗೊಂಡ ಕೇಂದ್ರವನ್ನು ನಿರ್ಮಿಸಲಿದ್ದಾರೆ ಎಂದೂ ಪ್ರಮೋದ್ ವಿವರಿಸಿದರು.
ಹಲವು ದಶಕಗಳ ಹಿಂದೆ ನಿರ್ಮಿಸಲಾದ ಈ ಆಸ್ಪತ್ರೆ ಕಟ್ಟಡ ದುರ್ಬಲವಾಗಿದ್ದು, ಸ್ಥಳಾವಕಾಶ ಹಾಗೂ ಸೌಲಭ್ಯಗಳ ಕೊರತೆಯೂ ಕಾಣಿಸಿಕೊಂಡಿದೆ. ಅಲ್ಲದೇ ಉಡುಪಿಗೊಂದು ಸುಸಜ್ಜಿತ ಹೈಟೆಕ್ ಆಸ್ಪತ್ರೆಯ ಅಗತ್ಯವನ್ನು ಮನಗಂಡು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ಸರಕಾರಕ್ಕೆ ನಯಾಪೈಸೆ ಖರ್ಚು ಬಾರದಂತೆ ಉಡುಪಿಯವರೇ ಆದ ಬಿ.ಆರ್.ಶೆಟ್ಟಿ ನೇತೃತ್ವದ ಸಂಸ್ಥೆಯೊಂದಿಗೆ ರಾಜ್ಯ ಸರಕಾರ ಒಪ್ಪಂದವನ್ನು ಮಾಡಿಕೊಂಡಿದೆ ಎಂದವರು ಹೇಳಿದರು.
ಸಂಸ್ಥೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ತನ್ನದೇ ವೆಚ್ಚದಲ್ಲಿ ನಿರ್ಮಿಸಿ ಸಂಪೂರ್ಣ ನಿರ್ವಹಣೆಗೆ ಒಪ್ಪಿಕೊಂಡಿದೆ. ಇದರಲ್ಲಿ ಈಗಿರುವ ಎಲ್ಲರಿಗೂ ಉಚಿತ ಸೇವೆ ಲಭ್ಯವಾಗಲಿದೆ. ಅಗತ್ಯ ಬಿದ್ದರೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಅವರಿಗೆ ಉಚಿತ ಸೇವೆ ನೀಡಲು ಬದ್ಧರಿದ್ದಾರೆ ಎಂದೂ ಪ್ರಮೋದ್ ತಿಳಿಸಿದರು.
ಶಂಕುಸ್ಥಾಪನೆ ನಡೆದ ಒಂದು ವರ್ಷದ ಅವಧಿಯೊಳಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂಸ್ಥೆ ನಿರ್ಮಿಸಲಿದೆ. ಬಳಿಕ ಒಂದೂವರೆ ವರ್ಷದೊಳಗೆ 400 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲಿದೆ. ಬಳಿಕ 24 ತಿಂಗಳ ಅವಧಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಒಪ್ಪಿಕೊಂಡಿದೆ. ಈ ಎರಡೂ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ( ಅಥವಾ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿಯೊಂದನ್ನು ನೇಮಿಸಲಾಗುವುದು. ಈ ಸಮಿತಿಯಲ್ಲಿ ಬೆಂಗಳೂರಿನ ಆರೋಗ್ಯ ಸೇವಾ ಸಚಿವಾಲಯದ ಜಂಟಿ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾಸರ್ಜನ್ (ಸದಸ್ಯ ಕಾರ್ಯದರ್ಶಿ) ಹಾಗೂ ಬಿ.ಆರ್.ಶೆಟ್ಟಿ ಅವರ ಸಂಸ್ಥೆಯ ಪ್ರತಿನಿಧಿಯೊಬ್ಬರು ಸದಸ್ಯರಾಗಿ ಇರುತ್ತಾರೆ.
ಸಮಿತಿಯ ಸೂಚನೆಯಂತೆಯೇ ಆಸ್ಪತ್ರೆಯ ದೈನಂದಿನ ನಿರ್ವಹಣೆ ನಡೆಯಲಿದ್ದು, ನಿರ್ವಹಣೆ ಜವಾಬ್ದಾರಿ ಮಾತ್ರ ಸಂಪೂರ್ಣವಾಗಿ ಸಂಸ್ಥೆಗೆ ಸೇರಿದೆ. ಬಿಪಿಎಲ್ ಕಾರ್ಡುದಾರರಿಗೆ ಹಾಗೂ ಸರಕಾರಿ ಸೌಲಭ್ಯಗಳ ಫಲಾನುಭವಿಗಳಿಗೆ ಇಲ್ಲಿ ಈಗಿನಂತೆ ಎಲ್ಲಾ ಸೇವೆ ಹಾಗೂ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿ ದೊರೆಯಲಿದೆ ಎಂದು ಪ್ರಮೋದ್ ತಿಳಿಸಿದರು.
ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲೂ ಸಮಿತಿ ನಿಗಾ ಇಡಲಿದ್ದು, ಅಲ್ಲಿಯೂ ಚಿಕಿತ್ಸಾ ದರವನ್ನು ಸಮಿತಿಯೇ ನಿರ್ದರಿಸಲಿದೆ. ಸಾರ್ವಜನಿಕರು ಶೋಷಣೆಗೆ ಒಳಗಾಗದಂತೆ ಎಚ್ಚರ ವಹಿಸಲಾಗುವುದು. ಒಂದು ವೇಳೆ ಸಂಸ್ಥೆಯ ನಿರ್ವಹಣೆ ಒಪ್ಪಿತವಾಗದಿದ್ದರೆ ಒಪ್ಪಂದವನ್ನು ರದ್ದುಪಡಿಸಲೂ ಎಂಓಯುನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಆಸ್ಪತ್ರೆಗೆ ಬೇಕಾದ ವೈದ್ಯರು, ಸ್ಪೆಷಲಿಸ್ಟ್, ನರ್ಸ್, ಇತರ ಸಿಬ್ಬಂದಿಗಳನ್ನೂ ಸಂಸ್ಥೆಯೇ ನೇಮಕಮಾಡಲಿದೆ. ಸರಕಾರ ಜಾಗವನ್ನು ಲೀಸ್‌ನಲ್ಲಿ ನೀಡಿದ್ದು ಬಿಟ್ಟರೆ, ನಯಾಪೈಸೆ ಖರ್ಚು ಮಾಡುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹಾಗೂ ಬಿ.ಆರ್.ಶೆಟ್ಟಿ ಸಂಸ್ಥೆಯ ಪ್ರತಿನಿಧಿ ಎಂ.ಶ್ರೀನಾಗೇಶ್ ಹೆಗ್ಡೆ ಉಪಸ್ಥಿತರಿದ್ದರು.
ಸಿದ್ಧರಾಮಯ್ಯರಿಂದ ಶಂಕುಸ್ಥಾಪನೆ
200 ಹಾಸಿಗೆಗಳ ನೂತನ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅ.30ರ ರವಿವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಮೋದ್ ತಿಳಿಸಿದರು.
ರವಿವಾರ ಅಪರಾಹ್ನ 2 ಗಂಟೆಗೆ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಅವರು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.







