ಭಾರತ -ಕಿವೀಸ್ ಸಮಬಲ
ನಾಲ್ಕನೆ ಏಕದಿನ ಪಂದ್ಯದಲ್ಲಿ ಧೋನಿ ಪಡೆಗೆ 19 ರನ್ಗಳ ಸೋಲು

ನಿಶಮ್ ಎಸೆತದಲ್ಲಿ ಧೋನಿ ಕ್ಲೀನ್ ಬೌಲ್ಡ್ ಆಗಿದ್ದ ಕ್ಷಣ.
ರಾಂಚಿ, ಅ.26: ಭಾರತದ ಕ್ರಿಕೆಟ್ ತಂಡ ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ನಡೆದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 19ರನ್ಗಳ ಸೋಲು ಅನುಭವಿಸಿದೆ.
ಗೆಲುವಿಗೆ 261 ರನ್ಗಳ ಸವಾಲನ್ನು ಪಡೆದ ಭಾರತ 48.4 ಓವರ್ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ.
ಆರಂಭಿಕ ದಾಂಡಿಗ ಅಜಿಂಕ್ಯ ರಹಾನೆ (57)ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಉಪನಾಯಕ ವಿರಾಟ್ ಕೊಹ್ಲಿ 45 ರನ್ ಗಳಿಸಿದರು. ನಾಯಕ ಎಂಎಸ್ ಧೋನಿ ತವರಿನ ಪಂದ್ಯದಲ್ಲಿ 11ರನ್ ಗಳಿಸಿ ಅಭಿಮಾನಿಗಳನ್ನು ನಿರಾಶೆಗೊಳಿಸಿದರು.
ಅಕ್ಷರ್ ಪಟೇಲ್ (38) ರೋಹಿತ್ ಶರ್ಮ(11), ಮಾನೀಷ್ ಪಾಂಡೆ (12), ಧವಳ್ ಕುಲಕರ್ಣಿ (ಔಟಾಗದೆ 25) ಎರಡಂಕೆಯ ಕೊಡುಗೆ ನೀಡಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ. ಕೆದಾರ್ ಜಾಧವ್(0) ಖಾತೆ ತೆರೆಯಲಿಲ್ಲ. ಹಾರ್ದಿಕ್ ಪಾಂಡ್ಯ 9ರನ್, ಉಮೇಶ್ ಯಾದವ್ 7 ರನ್ ಗಳಿಸಿ ಔಟಾದರು.
ನ್ಯೂಝಿಲೆಂಡ್ ಬೌಲರ್ಗಳಾದ ಟಿಮ್ ಸೌಥಿ (40ಕ್ಕೆ 3), ನಿಶಮ್(38ಕ್ಕೆ2), ಬೌಲ್ಟ್(48ಕ್ಕೆ 2), ಸ್ಯಾಂಟ್ನೆರ್ (38ಕ್ಕೆ1), ಮುತ್ತು ಐಶ್ ಸೋಧಿ (52ಕ್ಕೆ 1) ದಾಳಿಗೆ ಭಾರತ ತತ್ತರಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ.
ನ್ಯೂಝಿಲೆಂಡ್ 260/7:ನ್ಯೂಝಿಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟದಲ್ಲಿ 260 ರನ್ ಗಳಿಸಿತ್ತು.
ಪ್ರವಾಸದಲ್ಲಿ ಇದೇ ಮೊದಲ ಬಾರಿ ಟಾಸ್ ಜಯಿಸಿದ ನ್ಯೂಝಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಲಥಾಮ್ ಮೊದಲ ವಿಕೆಟ್ಗೆ 15.3 ಓವರ್ಗಳಲ್ಲಿ 96 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು.
ನ್ಯೂಝಿಲೆಂಡ್ನ ಆರಂಭದ ಬ್ಯಾಟಿಂಗ್ ನೋಡಿದರೆ 300 ರನ್ ದಾಖಲಿಸುವ ಸಾಧ್ಯತೆ ಕಂಡು ಬಂದಿತ್ತು. ಯಾಕೆಂದರೆ ಅಗ್ರ ಸರದಿಯ ಬ್ಯಾಟಿಂಗ್ ಚೆನ್ನಾಗಿತ್ತು. ಮೊದಲ 10 ಓವರ್ಗಳಲ್ಲಿ ಆರಂಭಿಕ ಜೋಡಿ 80 ರನ್ ಕಲೆ ಹಾಕಿತು. ಆದರೆ ಬಳಿಕ ದುರ್ಬಲಗೊಂಡಿತು. ಲಥಾಮ್ 39 ರನ್ ಗಳಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡುವ ಮೂಲಕ ನ್ಯೂಝಿಲೆಂಡ್ನ ಮೊದಲ ವಿಕೆಟ್ ಪತನಗೊಂಡಿತು.
ಗಪ್ಟಿಲ್ 56 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಇದು ಅವರ 31ನೆ ಅರ್ಧಶತಕವಾಗಿದೆ. ಅವರು ಎರಡು ಜೀವದಾನ ಪಡೆದಿದ್ದರು. ಕಳೆದ ಮೂರು ಏಕದಿನ ಪಂದ್ಯಗಳಲ್ಲಿ 39 ರನ್ ಗಳಿಸುವ ಮೂಲಕ ಕಳಪೆ ಫಾರ್ಮ್ ಪ್ರದರ್ಶಿಸಿದ್ದ ಗಪ್ಟಿಲ್ ಇಂದಿನ ಪಂದ್ಯದಲ್ಲಿ ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಉಮೇಶ್ ಯಾದವ್ ಮತ್ತು ಧವಳ್ ಕುಲಕರ್ಣಿ ಅವರನ್ನು ಗಪ್ಟಿಲ್ ಚೆನ್ನಾಗಿ ದಂಡಿಸಿದರು. ಧವಳ್ ಕುಲಕರ್ಣಿ ಅವರು ಬುಮ್ರಾ ಬದಲಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಕಂಡುಕೊಂಡಿದ್ದರು. ಕುಲಕರ್ಣಿಯ ಆರಂಭದ ಸ್ಪೆಲ್ ದುಬಾರಿಯಾಗಿತ್ತು. 4 ಓವರ್ಗಳಲ್ಲಿ 37 ರನ್ ಬಿಟ್ಟುಕೊಟ್ಟರು.
10 ಓವರ್ಗಳಲ್ಲಿ 80 ರನ್ ಗಳಿಸಿದ್ದ ನ್ಯೂಝಿಲೆಂಡ್ಗೆ ಅಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಅವರು ಒತ್ತಡ ಹೇರಿದರು. ಈ ಕಾರಣದಿಂದಾಗಿ ನ್ಯೂಝಿಲೆಂಡ್ಗೆ ಮತ್ತೆ 5 ಓವರ್ಗಳಲ್ಲಿ ಕೇವಲ 14 ಗಳಿಸಲು ಸಾಧ್ಯವಾಯಿತು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಗಪ್ಟಿಲ್ ಅವರು ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ಹೊರ ನಡೆದರು. ಔಟಾಗುವ ಮೊದಲು ಗಪ್ಟಿಲ್ 72 ರನ್(84ಎ, 12ಬೌ) ಗಳಿಸಿದರು.ಎರಡನೆ ವಿಕೆಟ್ಗೆ ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ 42 ರನ್ ಸೇರಿಸಿದರು. ಮೂರನೆ ವಿಕೆಟ್ಗೆ ವಿಲಿಯಮ್ಸನ್ ಮತ್ತು ರಾಸ್ ಟೇಲರ್ 46 ರನ್ ಜಮೆ ಮಾಡಿ ತಂಡದ ಸ್ಕೋರ್ನ್ನು 35.2 ಓವರ್ಗಳಲ್ಲಿ 184ಕ್ಕೆ ಏರಿಸಿದರು. ವಿಲಿಯಮ್ಸನ್ 41 ರನ್ ಗಳಿಸಿ ಔಟಾದ ಬಳಿಕ ನ್ಯೂಝಿಲೆಂಡ್ ತಂಡದ ಬ್ಯಾಟಿಂಗ್ ಕುಸಿಯಿತು. ನಿಶಮ್ 6 ರನ್ ಗಳಿಸಿದರು.
ಅಮಿತ್ ಮಿಶ್ರಾ ಅವರು ವಿಲಿಯಮ್ಸನ್ ಮತ್ತು ನಿಶಮ್ಗೆ ಪೆವಿಲಿಯನ್ ಹಾದಿ ತೋರಿಸಿದರು. ರಾಸ್ ಟೇಲರ್ 35 ರನ್ ,ವಾಟ್ಲಿಂಗ್ 14 ರನ್ , ಡೇವಿಚ್ 11ರನ್, ಸ್ಯಾಂಟ್ನೆರ್ ಔಟಾಗದೆ 17 ರನ್ ಮತ್ತು ಸೌಥಿ ಔಟಾಗದೆ 9ರನ್ ಗಳಿಸಿದರು.
ಭಾರತದ ಅಮಿತ್ ಮಿಶ್ರಾ 42ಕ್ಕೆ 2, ಉಮೇಶ್ ಯಾದವ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಹಂಚಿಕೊಂಡರು.
ಸ್ಕೋರ್ ವಿವರ
ನ್ಯೂಝಿಲೆಂಡ್: 50 ಓವರ್ಗಳಲ್ಲಿ 260/7
ಗಪ್ಟಿಲ್ ಸಿ ಧೋನಿ ಬಿ ಪಾಂಡ್ಯ 72
ಲಥಾಮ್ ಸಿ ರಹಾನೆ ಬಿ ಪಟೇಲ್ 39
ವಿಲಿಯಮ್ಸನ್ ಸಿ ಧೋನಿ ಬಿ ಮಿಶ್ರಾ 41
ಟೇಲರ್ ರನೌಟ್ 35
ನೀಶಮ್ ಸಿ ಕೊಹ್ಲಿ ಬಿ ಮಿಶ್ರಾ 06
ವಾಟ್ಲಿಂಗ್ ಸಿ ಶರ್ಮ ಬಿ ಕುಲಕರ್ಣಿ 14
ಡೆವಿಚ್ ಸಿ ಪಾಂಡ್ಯ ಬಿ ಯಾದವ್ 11
ಸ್ಯಾಂಟ್ನರ್ ಔಟಾಗದೆ 17
ಸೌಥಿ ಔಟಾಗದೆ 09
ಇತರ 16
ವಿಕೆಟ್ ಪತನ: 1-96, 2-138, 3-184, 4-192, 5-217, 6-223, 7-242.
ಬೌಲಿಂಗ್ ವಿವರ: ಉಮೇಶ್ ಯಾದವ್ 10-0-60-1
ಧವಳ್ ಕುಲಕರ್ಣಿ 7-0-59-1
ಹಾರ್ದಿಕ್ ಪಾಂಡ್ಯ 5-0-31-1
ಅಮಿತ್ ಮಿಶ್ರಾ 10-0-42-2
ಅಕ್ಷರ್ ಪಟೇಲ್ 10-0-38-1
ಜಾಧವ್ 8-0-27-0
ಭಾರತ: 48.4 ಓವರ್ಗಳಲ್ಲಿ 241/10
ಅಜಿಂಕ್ಯ ರಹಾನೆ ಎಲ್ಬಿಡಬ್ಲು ನೀಶಮ್ 57
ರೋಹಿತ್ ಶರ್ಮ ಸಿ ವಾಟ್ಲಿಂಗ್ ಬಿ ಸೌಥಿ 11
ವಿರಾಟ್ ಕೊಹ್ಲಿ ಸಿ ವಾಟ್ಲಿಂಗ್ ಬಿ ಸೋಧಿ 45
ಎಂಎಸ್ ಧೋನಿ ಬಿ ನಿಶಮ್ 11
ಅಕ್ಷರ್ ಪಟೇಲ್ ಬಿ ಬೌಲ್ಟ್ 38
ಮನೀಷ್ ಪಾಂಡೆ ಸಿ ಲಥಾಮ್ ಬಿ ಸೌಥಿ 12
ಜಾಧವ್ ಎಲ್ಬಿಡಬ್ಲು ಸೌಥಿ 00
ಹಾರ್ದಿಕ್ ಪಾಂಡ್ಯ ಸಿ ಲಥಾಮ್ ಬಿ ಸ್ಯಾಂಟ್ನರ್ 09
ಅಮಿತ್ ಮಿಶ್ರಾ ರನೌಟ್ 14
ಉಮೇಶ್ ಯಾದವ್ ಸಿ ಟೇಲರ್ ಬಿ ಬೌಲ್ಟ್ 07
ಧವಳ್ ಕುಲಕರ್ಣಿ ಔಟಾಗದೆ 25
ಇತರ 12
ವಿಕೆಟ್ ಪತನ: 1-19, 2-98, 3-128, 4-135, 5-154, 6-154, 7-167, 8-205,9-207, 10-241.
ಬೌಲಿಂಗ್ ವಿವರ:
ಸೌಥಿ 9-0-40-3
ಟ್ರೆಂಟ್ ಬೌಲ್ಟ್ 9.4-1-48-2
ನೀಶಮ್ 6-0-38-2
ಸ್ಯಾಂಟ್ನರ್ 10-0-38-1
ಸೋಧಿ 10-1-52-1
ಡೆವ್ಸಿಚ್ 4-0-22-0
ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್.







